ಹಣ ಅಕ್ರಮ ವರ್ಗಾವಣೆ ಪ್ರಕರಣ | ಶಹಜಹಾನ್ ಶೇಖ್ ವಿರುದ್ಧ ಈಡಿಯಿಂದ ಆರೋಪ ಪಟ್ಟಿ ಸಲ್ಲಿಕೆ

Update: 2024-05-30 15:32 GMT

ED | PTI 

ಹೊಸದಿಲ್ಲಿ : ಹಣ ಅಕ್ರಮ ವರ್ಗಾವಣ ಪ್ರಕರಣದ ತನಿಖೆಯ ಭಾಗವಾಗಿ ಪಶ್ಚಿಮಬಂಗಾಳದ ಟಿಎಂಸಿಯ ಅಮಾನತುಗೊಂಡ ನಾಯಕ ಶಹಜಹಾನ್ ಶೇಖ್, ಅವರ ಸಹೋದರ ಹಾಗೂ ಇಬ್ಬರು ಸಹವರ್ತಿಗಳ ವಿರುದ್ಧ ಮೊದಲ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಈಡಿ) ಗುರುವಾರ ಹೇಳಿದೆ.

ಶಿಬ್ ಪ್ರಸಾದ್ ಹಝ್ರಾ ಹಾಗೂ ದೀದರ್ ಬೊಕ್ಶಾ ಮೊಲ್ಲಾ ಅಲ್ಲದೆ, ಎಸ್.ಕೆ. ಅಲಂಗಿರ್ (ಶಹಜಹಾನ್ ಸಹೋದರ) ಅವರ ಹೆಸರನ್ನು ಪ್ರಾಸಿಕ್ಯೂಷನ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೋಲ್ಕತ್ತಾದಲ್ಲಿರುವ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಸಿಬಿಐ ಕೂಡ ಈ ವಾರ ಶೇಖ್ ಹಾಗೂ ಇತರ ಕೆಲವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಟಿಎಂಸಿಯ ಅಮಾನತುಗೊಂಡ ನಾಯಕ, ಆತನ ಸಹೋದರ ಹಾಗೂ ಅವರ ಇಬ್ಬರು ಸಹವರ್ತಿಗಳನ್ನು ಬಂಧಿಸಿತ್ತು. ಅವರನ್ನು ಈಗ ನ್ಯಾಯಾಂಗ ಬಂಧನದ ಅಡಿಯಲ್ಲಿ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಪೂರಕ ಆರೋಪ ಪಟ್ಟಿ ಸಲ್ಲಿಸಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಶ್ಚಿಮಬಂಗಾಳದಲ್ಲಿ ಸಾರ್ವಜನಿಕ ಪಡಿತರ ವಿತರಣೆ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಜನವರಿ 5ರಂದು ಪಶ್ಚಿಮಬಂಗಾಳದ ಉತ್ತರ 24 ಪರಗಣದ ಸಂದೇಶಖಾಲಿಯಲ್ಲಿರುವ ಶೇಖ್ ಶಹಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ತೆರಳಿದ್ದರು. ಈ ಸಂದರ್ಭ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶೇಖ್ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಮಾರ್ಚ್ 30ರಂದು ಬಂಧಿಸಿತ್ತು.

ಶೇಖ್ ಹಾಗೂ ಆತನ ಸಹವರ್ತಿಗಳ ವಿರುದ್ಧದ ಹಣ ಅಕ್ರಮ ವರ್ಗಾವಣೆ ಕುರಿತ ಇತ್ತೀಚೆಗಿನ ತನಿಖೆ ಬೆದರಿಕೆ, ಹತ್ಯೆ, ಹತ್ಯೆ ಯತ್ನ, ಸುಲಿಗೆ, ಭೂಮಿ ಅತಿಕ್ರಮಣ ಮೊದಲಾದ ಆರೋಪಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳ ಪೊಲೀಸರು ದಾಖಲಿಸಿದ ಹಲವು ಎಫ್ಐಆರ್ಗಳಿಗೆ ಸಂಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News