ಗುಜರಾತ್ ಪ್ರವಾಹ: ಸ್ಕೂಟರ್‌ನಲ್ಲಿ ಮೊಸಳೆಯನ್ನು ಹೊತ್ತೊಯ್ದ ಐಎಂಎ ಸ್ವಯಂಸೇವಕರು; ವಿಡಿಯೋ ವೈರಲ್

Update: 2024-09-01 11:01 GMT

Screengrab:X/@DixitGujarat

ವಡೋದರಾ : ಗುಜರಾತಿನ ಹಲವು ಜಿಲ್ಲೆಗಳು ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ಒಳಗಾಗಿದ್ದು, ಮೊಸಳೆಗಳ ವಾಸಸ್ಥಾನವಾಗಿದ್ದ ವಿಶ್ವಾಮಿತ್ರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ದಡ ಮೀರಿ ಹರಿಯುತ್ತಿದೆ. ಪರಿಣಾಮವಾಗಿ ವಡೋದರಾದಲ್ಲಿ ಮೊಸಳೆಗಳ ಉಪಟಳಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಎನ್‌ಜಿಒಗಳು ಹಾವುಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದರೆ, ಇಬ್ಬರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸ್ವಯಂಸೇವಕರು ಸ್ಕೂಟರ್‌ನಲ್ಲಿ ಮೊಸಳೆಯನ್ನು ಹೊತ್ತೊಯ್ಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರಕರ್ತ ದೀಕ್ಷಿತ್‌ ಸೋನಿ X ಹಂಚಿಕೊಂಡ ವೀಡಿಯೊದಲ್ಲಿ, ವಡೋದರದ ಜನನಿಬಿಡ ರಸ್ತೆಯಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿರುವ ಸ್ವಯಂಸೇವಕ ಮೊಸಳೆಯನ್ನು ಹಿಡಿದುಕೊಂಡು ಬಾಯಿಗೆ ಟೇಪ್ ಹಾಕುತ್ತಿರುವ ದೃಶ್ಯವಿದೆ.

ವೀಡಿಯೊ ವೈರಲ್ ಆದ ಕೂಡಲೇ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ವಯಂಸೇವಕರನ್ನು ಶ್ಲಾಘಿಸಿದ್ದಾರೆ.

ಒಬ್ಬ ಬಳಕೆದಾರರು, “ಈ ರೀತಿಯ ಸಂವೇದನೆಯಿರುವ ಹುಡುಗರಿಗೆ ಅಭಿನಂದನೆಗಳು. ಮಾನವೀಯತೆಯು ಅಸ್ತಿತ್ವದಲ್ಲಿದೆ ಎಂಬ ನಂಬಿಕೆಯನ್ನು ಈ ದೃಶ್ಯವು ಹೇಳುತ್ತದೆ" ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು “ಅವರು ಅದನ್ನು ತಮ್ಮ ಸಾಕುಪ್ರಾಣಿಯಂತೆ ಹಿಡಿದುಕೊಂಡಿದ್ದಾರೆ. ಅವರು ಧೈರ್ಯಶಾಲಿಗಳು! ” ಎಂದು ಕಮೆಂಟ್ ಮಾಡಿದ್ದಾರೆ.

"ಇಲ್ಲಿ ಒಂದು ಉಪಾಯವಿದೆ, ನನ್ನ ಮಾತನ್ನು ಕೇಳಿ - ಅದನ್ನು ಮತ್ತೆ ನದಿಯಲ್ಲಿ ಬಿಡಿ" ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನೊಂದು ವೀಡಿಯೋದಲ್ಲಿ ನಾಲ್ಕು ಮೊಸಳೆಗಳು ವಿಶ್ವಾಮಿತ್ರಿ ನದಿಯಲ್ಲಿ ಈಜುತ್ತಿದ್ದು, ಒಂದು ಮೊಸಳೆಯು ಬೇಟೆಯನ್ನು ಬಾಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಕಳೆದ ನಾಲ್ಕು ದಿನಗಳಲ್ಲಿ ವಡೋದರಾ ನಗರದ ವಿವಿಧ ಸ್ಥಳಗಳಲ್ಲಿ ಕನಿಷ್ಠ 25 ಮೊಸಳೆಗಳನ್ನು ರಕ್ಷಿಸಲಾಗಿದೆ.

ಅವುಗಳಲ್ಲಿ ಒಂದು ನರಭಕ್ಷಕ ಮೊಸಳೆಯನ್ನು ಮೃಗಾಲಯದ ಆವರಣದಿಂದ ತಪ್ಪಿಸಿಕೊಂಡ ನಂತರ ಅದನ್ನು ಮತ್ತೆ ಸೆರೆಹಿಡಿಯಲಾಯಿತು. ಆ ಮೊಸಳೆಯನ್ನು 2020 ರಿಂದ ಸಯಾಜಿಬಾಗ್ ಮೃಗಾಲಯದಲ್ಲಿರಿಸಲಾಗಿತ್ತು. 54 ವರ್ಷದ ಮಹಿಳೆಯನ್ನು ಕೊಂದ ಬಳಿಕ ಅದನ್ನು ಸೆರೆ ಹಿಡಿಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News