ನಾಲ್ಕು ತಿಂಗಳ ಹಿಂದೆ ನಿವೃತ್ತಿಯಾಗಿದ್ದ ಇಮಾದ್ ವಸೀಂ ಪಾಕಿಸ್ತಾನ ಕ್ರಿಕೆಟ್ ಗೆ ಮರಳಲು ಚಿಂತನೆ
ಕರಾಚಿ: ನಾಲ್ಕು ತಿಂಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದ ಪಾಕಿಸ್ತಾನದ ಆಲ್ರೌಂಡರ್ ಇಮಾದ್ ವಸೀಂ ಅವರು ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಗ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಹೇಳಿಕೊಂಡಿದ್ದಾರೆ.
35ರ ವಯಸ್ಸಿನ ವಸೀಂ 2023ರ ನವೆಂಬರ್ ನಲ್ಲಿ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು. ವಿದೇಶಿ ಲೀಗ್ ಗಳಲ್ಲಿ ಆಡುವತ್ತ ಗಮನ ಹರಿಸಲು ಇದು ನನಗೆ ಸರಿಯಾದ ಸಮಯ ಎಂದಿದ್ದರು.
ವಸೀಂ ಶನಿವಾರ ಹಾಗೂ ಸೋಮವಾರ ನಡೆದಿರುವ ಎಲಿಮಿನೇಟರ್ 2 ಹಾಗೂ 9ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ನ ಫೈನಲ್ ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿಯಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಿಎಸ್ಎಲ್ ಫೈನಲ್ ನಲ್ಲಿ ಐದು ವಿಕೆಟ್ ಗೊಂಚಲು(5-23) ಪಡೆದಿದ್ದ ಇಮಾದ್ ವಸೀಂ ಅವರು ಇಸ್ಲಾಮಾಬಾದ್ ತಂಡವು 2018ರ ನಂತರ ಮೊದಲ ಬಾರಿ ಪ್ರಶಸ್ತಿ ಜಯಿಸಲು ನೆರವಾಗಿದ್ದರು.
ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡಲು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ ಎಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಸೀಂ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುವಾಗ ನಾನು ಹೆಸರು ಮಾಡಿದ್ದೆ. ನನ್ನ ದೇಶಕ್ಕೆ ನನ್ನ ಅಗತ್ಯವಿದ್ದರೆ ನಾನು ಲಭ್ಯವಿರುತ್ತೇನೆ. ಅಗತ್ಯವಿಲ್ಲದಿದ್ದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಇಮಾದ್ ವಸೀಂ ಹೇಳಿದ್ದಾರೆ.
ನಾನು ನಿವೃತ್ತಿಯಾದ ನಂತರ ನಾಯಕ ಶಾಹೀನ್ ಅಫ್ರಿದಿ ನನಗೆ ಫೋನ್ ಮಾಡಿದ್ದರು. ಪಿಎಸ್ಎಲ್ ನಂತರ ನಾನು ನಿಮ್ಮೊಂದಿಗೆ ಮಾತನಾಡುವೆ ಎಂದು ಹೇಳಿದ್ದೆ ಎಂದು ವಸೀಂ ಹೇಳಿದ್ದಾರೆ.
ಮಾರ್ಚ್ 25ರಿಂದ ಕಾಕುಲ್ ನ ಸೇನಾ ನೆಲೆಯಲ್ಲಿ ಆರಂಭವಾಗಲಿರುವ ತರಬೇತಿ ಶಿಬಿರಕ್ಕಾಗಿ ಪಾಕಿಸ್ತಾನ ಆಯ್ಕೆ ಸಮಿತಿಯು ಶೀಘ್ರವೇ ಆಟಗಾರರ ತಂಡವನ್ನು ಪ್ರಕಟಿಸಲಿದೆ. ಎಪ್ರಿಲ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆಯುವ ಟಿ20 ಸರಣಿಗಾಗಿ ಇದೇ ತಂಡವನ್ನು ಆಯ್ಕೆ ಮಾಡಲಿದ್ದಾರೆ.
ನಾಯಕ ಬಾಬರ್ ಆಝಂರೊಂದಿಗನ ಭಿನ್ನಾಭಿಪ್ರಾಯದಿಂದಾಗಿ ಇಮಾದ್ ವಸೀಂ ನಿವೃತ್ತಿಯಾಗಿದ್ದಾರೆಂಬ ವಿಚಾರ ರಹಸ್ಯವಾಗಿ ಉಳಿದಿಲ್ಲ. ಈ ಇಬ್ಬರು ಹಿಂದಿನ ಪಿಎಸ್ಎಲ್ ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್ ತಂಡ ಪರ ಒಟ್ಟಿಗೆ ಆಡಿರಲಿಲ್ಲ.