ಶಾಯರಿ, ಕವನಗಳ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ ಸಂಸದ ಇಮ್ರಾನ್ ಪ್ರತಾಪ್ ಗಢಿ

Update: 2024-07-03 11:53 GMT

ಸಂಸತ್ತಿನಲ್ಲಿ ತಮ್ಮದೇ ವಿಶಿಷ್ಟ ಶೈಲಿಯ ಭಾಷಣಗಳಿಂದ ಹಲವು ಸಂಸದರು ದೇಶಾದ್ಯಂತ ಮನೆಮಾತಾಗಿದ್ದಾರೆ. ರಾಹುಲ್ ಗಾಂಧಿ ನೇರ, ನಿಷ್ಠುರ ಮಾತುಗಳಿಗೆ ಪ್ರಸಿದ್ಧರಾಗಿದ್ದರೆ, ಮಹುವಾ ಮೊಯಿತ್ರಾ ಕೂಡ ತಮ್ಮ ದಿಟ್ಟ ಮಾತುಗಳ ಮೂಲಕ ದೇಶಾದ್ಯಂತ ಚಿರಪರಿಚಿತರಾಗಿದ್ದಾರೆ.

ಅದೇ ತೃಣಮೂಲ ಕಾಂಗ್ರೆಸ್ ನ ಕಲ್ಯಾಣ್ ಬ್ಯಾನರ್ಜಿ ತೀರಾ ಗಂಭೀರ ವಿಷಯಗಳನ್ನೂ ತಮಾಷೆಯಾಗಿ ಹೇಳುವ ಮೂಲಕ ಸುದ್ದಿಯಾಗುತ್ತಾ, ವಿವಾದವಾಗುತ್ತಲೂ ಇರುತ್ತಾರೆ. ಸಂಸತ್ತಿನಲ್ಲಿ ಆಕರ್ಷಕವಾಗಿ ಮಾತಾಡುವ ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ರಾಜ್ಯ ಸಭಾ ಸದಸ್ಯ, ಖ್ಯಾತ ಉರ್ದು ಕವಿ ಇಮ್ರಾನ್ ಪ್ರತಾಪ್ ಗಢಿ.

ತಮ್ಮ ಅನೇಕ ಶಾಯರಿಗಳು, ಕವನಗಳ ಮೂಲಕ ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಇಮ್ರಾನ್ ಮಾಡುತ್ತಾ ಬಂದಿದ್ದಾರೆ. ಆ ಮೂಲಕವೇ ಭಾರೀ ಖ್ಯಾತಿ ಗಳಿಸಿದ ಇಮ್ರಾನ್ ಆಮೇಲೆ ಕಾಂಗ್ರೆಸ್ ಸೇರಿ ಅದರ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದಾರೆ. ಈಗ ಅವರು ರಾಜ್ಯಸಭಾ ಸಂಸದ. ರಾಷ್ಟ್ರಪತಿಗಳ ಭಾಷಣೆಗೆ ವಂದನೆ ನಿರ್ಣಯದ ಮೇಲೆ ಚರ್ಚೆ ವೇಳೆಯೂ ಇಮ್ರಾನ್ ಮಾಡಿರುವ ಭಾಷಣ ಈಗ ವೈರಲ್ ಆಗಿದೆ.

ಇಮ್ರಾನ್ ಭಾಷಣವನ್ನು ಶುರು ಮಾಡಿದ್ದೇ "ನಾನು ಕನ್ನಡಿಯಾಗಿದ್ದೇನೆ, ನಿಮ್ಮಲ್ಲಿರುವಂತಹ ಕಲೆಗಳನ್ನು ತೋರಿಸಲಿದ್ದೇನೆ, ಸಮಸ್ಯೆ ಇರುವವರು ಕನ್ನಡಿ ಎದುರಿಂದ ದೂರ ಸರಿಯಿರಿ" ಎಂದು. ಬಿಜೆಪಿಯ ಮೇಲಿರುವಂತಹ ಆರೋಪಗಳನ್ನು ಒಂದೊಂದಾಗಿ, ಅಷ್ಟೇ ಆಕರ್ಷಕ ಪದಗಳಲ್ಲಿ ಸದನದ ಎದುರಿಡಲು ಇಮ್ರಾನ್ ಪ್ರಾರಂಭಿಸಿದರು.

ಇಮ್ರಾನ್ ಶುರು ಮಾಡಿದ್ದು ಬಿಜೆಪಿಯ ಚುನಾವಣಾ ತಂತ್ರದಿಂದ. ಚುನಾವಣೆಯಲ್ಲಿ ಬಿಜೆಪಿಗೆ ಜನರಿಂದ ಸಿಕ್ಕಿದ ಪಾಠದಿಂದ. "ಒಬ್ಬ ಆಕಾಶದೆತ್ತರಕ್ಕೆ ಹೋದರೂ ಒಂದು ದಿನ ಕೆಳಗೆ ಬರಲೇ ಬೇಕು" ಎಂದು ಹೇಳಿ ಸರಕಾರಕ್ಕೆ ಇಮ್ರಾನ್ ಕನ್ನಡಿ ತೋರಿಸಿದರು.

ಹೇಗೆ ಚುನಾವಣಾ ಪ್ರಚಾರದಲ್ಲಿ ಘನತೆಯ ಭಾಷೆಯ ಎಲ್ಲಾ ಮಿತಿಗಳನ್ನು ಮೀರಿ ಮಚ್ಲಿ, ಮಂಗಲ್ ಸೂತ್ರ, ಮುಜ್ರಾ ಅಂತಹ ಪದಗಳನ್ನು ಬಳಸಲಾಯಿತು? ಹೇಗೆ ಶಿವಸೇನೆ ಮತ್ತು ಎನ್ ಸಿ ಪಿ ಗಳನ್ನು ವಿಭಜಿಸಲಾಯಿತು ? ಹೇಗೆ ವಿಪಕ್ಷದ ಅತಿದೊಡ್ಡ ಪಕ್ಷವಾದ ಕಾಂಗ್ರೆಸಿನ ಬಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು? ಇಷ್ಟೆಲ್ಲಾ ಮಾಡಿಯೂ ಜನತೆಯ ನ್ಯಾಯಾಲಯದಲ್ಲಿ ಯಾವ ರೀತಿಯ ತೀರ್ಮಾನ ಬಂತು ಎಂಬುದನ್ನು ಇಮ್ರಾನ್ ತಮ್ಮದೇ ಆಕರ್ಷಕ ರೀತಿಯಲ್ಲಿ ವಿವರಿಸಿದರು.

ಸರಕಾರ ಯಾವ ʼಅಮೃತ್ ಕಾಲʼದ ಕುರಿತಾಗಿ ಮಾತನಾಡುತ್ತಿದೆ ಎಂದು ಇಮ್ರಾನ್ ಪ್ರಶ್ನಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬೇಸತ್ತು ಹೋಗಿರುವ ವಿದ್ಯಾರ್ಥಿಗಳಿಂದ ಅಮೃತ್ ಕಾಲದ ಬಗ್ಗೆ ಕೇಳಿ ಎಂದ ಅವರು, ಮಣಿಪುರದಲ್ಲಿ ಬೆತ್ತಲು ಮಾಡಲಾದ ಮಹಿಳೆಯರಲ್ಲಿ, ಜಂತರ ಮಂತರದಲ್ಲಿ ಎಳೆದಾಡಲಾಗಿದ್ದ ಒಲಂಪಿಕ್ ಪದಕ ತಂದ ಕುಸ್ತಿಪಟುಗಳಲ್ಲಿ, ಹತ್ರಸ್ ನಲ್ಲಿ ಅತ್ಯಾಚಾರ ಮಾಡಿ ಕುಟುಂಬಕ್ಕೆ ತಿಳಿಸದೇ ಸುಟ್ಟು ಹಾಕಿದ ಮಗಳಲ್ಲಿ, ಬಿಲ್ಕಿಸ್ ಬಾನು ಅವರಲ್ಲಿ, ಗುಂಪು ಸೇರಿ ಕೊಂದು ಹಾಕಿದ ಪೆಹ್ಲು ಖಾನ್ ಅವರ ತಾಯಿಯಲ್ಲಿ, ಹಾಫಿಜ್ ಜುನೈದ್ ರ ಮನೆಯವರಲ್ಲಿ, ಕಾಣೆಯಾಗಿ ಹೋದ ನಜೀಬ್ ತಾಯಿಯಲ್ಲಿ, ತಬ್ರೇಜ್ ಅನ್ಸಾರಿ ಯವರ ವಿಧವೆಯಲ್ಲಿ, ಸಹರಾನ್ ಪುರದಲ್ಲಿ ಕೊಲ್ಲಲ್ಪಟ್ಟ ಮೂರು ಹುಡುಗರಲ್ಲಿ, ಕ್ರಿಕೆಟ್ ಪಂದ್ಯದ ವೇಳೆ ಗುಜರಾತ್ ನಲ್ಲಿ ಕೊಳಲ್ಪಟ್ಟ ಸಲ್ಮಾನ್ ರಲ್ಲಿ, ಅಲಿಗಡ್ ನಲ್ಲಿ ಕೊಂದುಹಾಕಿದ ಮೇಲೆ ಮೃತಪಟ್ಟವರ ಮೇಲೆಯೇ ಡಕಾಯತಿಯ ಆರೋಪ ಹೊರಿಸಲ್ಪಟ್ಟ ಯುವಕರಲ್ಲಿ - ಇವರೆಲ್ಲರಲ್ಲಿ ಅಮೃತ ಕಾಲ ಬಂತೋ ಎಂದು ನಾನು ಪ್ರಶ್ನಿಸುವೆ ಎಂದು ಇಮ್ರಾನ್ ಹೇಳುತ್ತಾರೆ.

ಒಂದು ನಿಮಿಷದ ಕವನವು ಗಂಟೆಗಳ ಭಾಷಣಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬ ಮಾತನ್ನು ನಿಜವಾಗಿಸುವಂತಿತ್ತು ಇಮ್ರಾನ್ ಮಾತು.

ಇನ್ನು ಆರೋಗ್ಯದ ಕುರಿತಾಗಿ ಮಾತನಾಡಲು ಸರಕಾರಕ್ಕೆ ಕೇವಲ ಅರ್ಧ ನಿಮಿಷ ಸಿಕ್ಕಿದ್ದೇ ಎಂದು ಇಮ್ರಾನ್ ಪ್ರಶ್ನಿಸಿದರು. ಹೆಚ್ಚುತ್ತಿರುವ ಕ್ಯಾನ್ಸರ್ ಮತ್ತು ಯುವಕರಲ್ಲಿ ಕಾಣುತ್ತಿರುವ ಹಾರ್ಟ್ ಅಟ್ಯಾಕ್ ಕುರಿತಾಗಿಯೂ ಇಮ್ರಾನ್ ಕಳವಳ ವ್ಯಕ್ತಪಡಿಸಿದರು.

ಏನೇನೆಲ್ಲ ಅಬ್ಬರದ ಪ್ರಚಾರ ಮಾಡಿಯೂ ಜನರು ನಿಮಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಇಮ್ರಾನ್ ಮೋದಿ ಸರಕಾರಕ್ಕೆ ನೆನಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News