ಮುಂದಿನ 10 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕನಿಷ್ಠ ಶೇ. 50 ಮಹಿಳಾ ಸಿಎಂಗಳು : ರಾಹುಲ್ ಗಾಂಧಿ

Update: 2023-12-01 16:26 GMT

ರಾಹುಲ್ ಗಾಂಧಿ | Photo: ANI  

ಹೊಸದಿಲ್ಲಿ: ಆರೆಸ್ಸೆಸ್ ಹಾಗೂ ಕಾಂಗ್ರೆಸ್ ನ ನಡುವಿನ ಮೂಲಭೂತ ವ್ಯತ್ಯಾಸವೆಂದರೆ, ಆರೆಸ್ಸೆಸ್ ಮಹಿಳೆಯರು ಅಧಿಕಾರದ ಭಾಗವಾಗುವುದನ್ನು ಬಯಸುವುದಿಲ್ಲ; ಆದರೆ, ಕಾಂಗ್ರೆಸ್ ಮಹಿಳೆಯರು ಅಧಿಕಾರದ ಭಾಗವಾಗಬೇಕು ಎಂದು ಬಯಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಆರೆಸ್ಸೆಸ್ ತನ್ನ ಇತಿಹಾಸದುದ್ದಕ್ಕೂ ಮಹಿಳೆಯರಿಗೆ ಅಧಿಕಾರ ನೀಡಿಲ್ಲ. ನಾನು ಇದನ್ನು ಹೇಳಿದರೆ, ಆರೆಸ್ಸೆಸ್ ನಾಯಕತ್ವ ನಮ್ಮದು ಮಹಿಳಾ ಸಂಘಟನೆ ಎನ್ನುತ್ತಾರೆ. ಆದರೆ, ಪ್ರಶ್ನೆ ಇರುವುದು ಮಹಿಳೆಯರು ಅಂತಹ ಸಂಘಟನೆಯ ಭಾಗವಾಗಿರುವ ಬಗ್ಗೆ ಅಲ್ಲ. ಬದಲಾಗಿ ಅವರು ಅದರಲ್ಲಿ ಅಧಿಕಾರ ಪಡೆಯಲು ಅವಕಾಶ ಇದೆಯೇ ಎಂಬುದು’’ ಎಂದು ಅವರು ಹೇಳಿದರು.

ಮಹಿಳಾ ಕಾಂಗ್ರೆಸ್ ನ ಕೇರಳ ಘಟಕ ಕೊಚ್ಚಿಯ ಮರೈನ್ ಡೈವ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ ರಾಜ್ಯ ಮಟ್ಟದ ಸಮಾವೇಶ ‘ಉತ್ಸವ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘‘ಯವತಿಯರು ಸಮರ್ಪಕವಾಗಿ ಉಡುಪು ಧರಿಸಿದರೆ ಅತ್ಯಾಚಾರಕ್ಕೆ ಒಳಗಾಗುವುದಿಲ್ಲ ಎಂದು ಬಲಪಂಥೀಯ ನಾಯಕರು ಹೇಳಿರುವುದನ್ನು ನಾನು ಕೇಳಿದ್ದೇನೆ. ಇದು ಅವರು ದೇಶದ ಪ್ರತಿಯೊಬ್ಬ ಮಹಿಳೆಗೆ ಮಾಡುವ ಅವಮಾನ. ಇದು ಕಾಂಗ್ರೆಸ್ ಹಾಗೂ ಆರೆಸ್ಸೆಸ್ ನಡುವೆ ಇರುವ ಭಿನ್ನತೆ’’ ಎಂದು ಅವರು ಹೇಳಿದರು.

ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ರಾಹುಲ್ ಗಾಂಧಿ, 10 ವರ್ಷಗಳ ಬಳಿಕ ಅನುಷ್ಠಾನಕ್ಕೆ ಬರುವ ಇತರ ಯಾವುದೇ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿರುವುದನ್ನು ನಾನು ಇದುವರೆಗೆ ನೋಡಿಲ್ಲ ಎಂದರು. ಮುಂದಿನ 10 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ತಮ್ಮ ಪಕ್ಷ ಕನಿಷ್ಠ ಶೇ. 50 ಮಹಿಳಾ ಮುಖ್ಯಮಂತ್ರಿಗಳನ್ನು ಹೊಂದಲಿದೆ ಎಂದರು.

‘‘ನಾವು ಇಂದು ಒಬ್ಬರೇ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಹೊಂದುವುದನ್ನು ಬಯಸುವುದಿಲ್ಲ. ಆದರೆ, ಉತ್ತಮ ಮುಖ್ಯಮಂತ್ರಿ ಆಗುವ ಎಲ್ಲಾ ಲಕ್ಷಣಗಳಿರುವ ಹಲವು ಮಹಿಳೆಯರು ಇದ್ದಾರೆ ಎಂಬುದು ನನಗೆ ತಿಳಿದಿದೆ. ಪಕ್ಷದ ದೃಷ್ಟಿಕೋನದಿಂದ, ನಾವು ಮಹಿಳೆಯರನ್ನು ಉತ್ತೇಜಿಸುವುದು ತುಂಬಾ ಮುಖ್ಯ’’ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News