ಮಮತಾ ಬ್ಯಾನರ್ಜಿ ವಿರುದ್ಧ ಅನುಚಿತ ಹೇಳಿಕೆ: ಬಿಜೆಪಿಯ ಅಭಿಜಿತ್ ಗಂಗೋಪಾಧ್ಯಾಯಗೆ ಚುನಾವಣಾ ಆಯೋಗ ನೋಟಿಸ್
Update: 2024-05-17 16:50 GMT
ಹೊಸದಿಲ್ಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಅನುಚಿತ, ನ್ಯಾಯಸಮ್ಮತವಲ್ಲದ ಹಾಗೂ ಅಗೌರವದ ಹೇಳಿಕೆ ನೀಡಿರುವುದಕ್ಕಾಗಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಹಾಗೂ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಮೇ 20ರಂದು ಸಂಜೆ 5 ಗಂಟೆಯ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಸೂಚಿಸಿದೆ.
ಹಾಲ್ಡಿಯಾದಲ್ಲಿ ಮೇ 15ರಂದು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿ ವಿರುದ್ಧ ನೀಡಿದ ಹೇಳಿಕೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
ಬಿಜೆಪಿ ಅಭಿಜಿತ್ ಗಂಗೋಪಾಧ್ಯಾಯರನ್ನು ಪಶ್ಚಿಮ ಬಂಗಾಳದ ತಾಮ್ಲೂಕ್ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಇಲ್ಲಿ ಮೇ 25ರಂದು ಚುನಾವಣೆ ನಡೆಯಲಿದೆ.