ಪಿಎಫ್ ಗೆ ವಿದೇಶಿ ಕಾರ್ಮಿಕರ ಸೇರ್ಪಡೆ ಸಂವಿಧಾನ ಬಾಹಿರ: ಹೈಕೋರ್ಟ್
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆಯ ವ್ಯಾಪ್ತಿಗೆ ವಿದೇಶಿ ಕಾರ್ಮಿಕರನ್ನು ಸೇರ್ಪಡೆ ಮಾಡುವ ಸಂಬಂಧ ಕಾನೂನಿಗೆ ತಿದ್ದುಪಡಿ ತಂದ ಹದಿನೈದು ವರ್ಷಗಳ ಬಳಿಕ, ಈ ನಿಬಂಧನೆಯನ್ನು "ಅಸಂವಿಧಾನಿಕ ಮತ್ತು ನಿರಂಕುಶ" ಎಂದು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ.
ಈ ತೀರ್ಪನ್ನು ಕರ್ನಾಟಕ ಸರ್ಕಾರ ಮತ್ತು ಇಪಿಎಫ್ಓ ಪ್ರಶ್ನಿಸುವ ಸಾಧ್ಯತೆ ಇದ್ದು, ಈ ಸಾಮಾಜಿಕ ಭದ್ರತಾ ಯೋಜನೆಗೆ ಈಗಾಗಲೇ ಸೇರ್ಪಡೆಯಾಗಿ ದೇಣಿಗೆ ನೀಡಿರುವ ಸಾವಿರಾರು ವಿದೇಶಿ ಕಾರ್ಮಿಕರ ಮೇಲೆ ಇದು ಪರಿಣಾಮ ಬೀರಲಿದೆ.
ಶಿಕ್ಷಣ, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನ ಕ್ಷೇತ್ರ ಹಲವು ಮಂದಿ ಈ ಸಂಬಂಧ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು, ವಿದೇಶಿಯರ ಸೇರ್ಪಡೆ ಭಾರತದ ಸಂವಿಧಾನದ 14ನೇ ವಿಧಿಗೆ ವಿರುದ್ಧ ಎಂದು ವಾದಿಸಿದ್ದರು.
ಎಲ್ಲ ವಿದೇಶಿ ಕಾರ್ಮಿಕರನ್ನು ಎಷ್ಟೇ ವೇತನವಿದ್ದರೂ ಈ ಯೋಜನೆಯಡಿ ಸೇರಿಸಲಾಗಿದೆ. ಆದರೆ ಭಾರತೀಯ ಕಾರ್ಮಿಕರು ಮಾಸಿಕ 15 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದರೆ ಅವರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎನ್ನುವುದು ಅರ್ಜಿದಾರರ ಮುಖ್ಯ ಅಹವಾಲು ಆಗಿತ್ತು.
"ವಿದೇಶಿ ಕಾರ್ಮಿಕರು ಕೇವಲ ಸೀಮಿತ ಅವಧಿಗೆ ಭಾರತದಲ್ಲಿ ಇರುತ್ತಾರೆ ಮತ್ತು ಅವರ ಇಡೀ ಜಾಗತಿಕ ವೇತನದ ಆಧಾರದಲ್ಲಿ ದೇಣಿಗೆ ನೀಡಬೇಕಾಗುತ್ತದೆ. ಇದು ದೊಡ್ಡ ಘಾಸಿ ಉಂಟು ಮಾಡಲಿದೆ" ಎಂದು ಅರ್ಜಿದಾರರು ವಾದಿಸಿದ್ದರು. ಈ ಆದೇಶ ವಿದೇಶಿ ಕಾರ್ಮಿಕರು ಮತ್ತು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.