ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರ ಎನ್‌ಜಿಒಗೆ ಆದಾಯ ತೆರಿಗೆ ವಿನಾಯಿತಿ ರದ್ದು

Update: 2024-09-27 09:53 GMT

ಹರ್ಷ ಮಂದರ್

ಹೊಸದಿಲ್ಲಿ: ತೆರಿಗೆ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರ ಎನ್‌ಜಿಒ ‘ಅಮನ್ ಬಿರಾದರಿ’ಗೆ ಆದಾಯ ತೆರಿಗೆ ಕಾಯ್ದೆಯ ಕಲಂ 12ಎ ಅಡಿ ನೀಡಲಾಗಿದ್ದ ವಿನಾಯತಿಯನ್ನು ಬುಧವಾರ ರದ್ದುಗೊಳಿಸಿದ್ದಾರೆ. ಅಂದರೆ ಈ ಎನ್‌ಜಿಒ ಇನ್ನು ಮುಂದೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಪಡೆಯುವುದಿಲ್ಲ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಂದರ್ ‘ಆದಾಯ ತೆರಿಗೆ ಇಲಾಖೆಯು ಮೂರು ತಿಂಗಳ ಹಿಂದೆ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸುವ ಬಗ್ಗೆ ನೋಟಿಸ್ ನೀಡಿತ್ತು. ಸುಮಾರು ಒಂದೂವರೆ ತಿಂಗಳ ಹಿಂದೆ ಸಂಸ್ಥೆಯು ನೋಟಿಸಿಗೆ ಉತ್ತರಿಸಿತ್ತು. ಆದರೆ ನೋಂದಣಿಯನ್ನು ರದ್ದುಗೊಳಿಸುವ ಆದೇಶದಲ್ಲಿ ನಾವು ನಮ್ಮ ನಿಲುವನ್ನು ವಿವರಿಸಿ ಎತ್ತಿದ್ದ ಯಾವುದೇ ಅಂಶಗಳಿಗೆ ಇಲಾಖೆಯು ಉತ್ತರಿಸಿಲ್ಲ ’ಎಂದು ತಿಳಿಸಿದರು.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನದ ಭಾಗವಾಗಿ ಎನ್‌ಜಿಒಗೆ ಹಣದ ಕೊಡುಗೆ ನೀಡಿದ್ದ ಕೆಲವು ವ್ಯಕ್ತಿಗಳ ಪಾನ್ ಸಂಖ್ಯೆಗಳನ್ನು ಒದಗಿಸಲಾಗಿಲ್ಲ ಎನ್ನುವುದು ಆದಾಯ ತೆರಿಗೆ ಇಲಾಖೆಯು ಉಲ್ಲೇಖಿಸಿರುವ ಕಾರಣಗಳಲ್ಲೊಂದಾಗಿದೆ ಎಂದು ಮಂದರ್ ತಿಳಿಸಿದರು.

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಲಾಗಿದ್ದ ಹಣವನ್ನು ಸಾಂಕ್ರಾಮಿಕದ ಸಂದರ್ಭದಲ್ಲಿ ದುರ್ಬಲರಿಗೆ ಆಹಾರವನ್ನು ವಿತರಿಸಲು ಬಳಸಲಾಗಿತ್ತು. ಕ್ರೌಡ್ ಫಂಡಿಂಗ್ ಭಾಗವಾಗಿ ಹಣವನ್ನು ಕೊಡುಗೆ ನೀಡಿದ್ದವರ ಪಾನ್ ಸಂಖ್ಯೆಗಳನ್ನು ಸಂಸ್ಥೆಯು ಒದಗಿಸುವುದು ಕಾನೂನುಬದ್ಧ ಅಗತ್ಯವಾಗಿರಲಿಲ್ಲ ಎಂದು ಮಂದರ್ ಹೇಳಿದರು.

ಅಂತರ್‌ಧರ್ಮೀಯ ಸಾಮರಸ್ಯಕ್ಕಾಗಿ ಪ್ರಚಾರ ಸಾಮಗ್ರಿಗಳ ಸೃಷ್ಟಿ ಸಂಸ್ಥೆಯ ಉದ್ದೇಶಿತ ಉದ್ದೇಶಗಳಲ್ಲಿ ಸೇರಿಲ್ಲ ಎನ್ನುವುದು ಇಲಾಖೆಯು ನೀಡಿರುವ ಇನ್ನೊಂದು ಕಾರಣವಾಗಿದೆ. ಆದರೆ ಅಮನ್ ಬಿರಾದರಿ ಕಲಂ 12 ಎ ಅಡಿ ಆದಾಯ ತೆರಿಗೆ ವಿನಾಯಿತಿಯನ್ನು ಕೋರುವಾಗ ಪಟ್ಟಿ ಮಾಡಿದ್ದ ಉದ್ದೇಶಗಳಲ್ಲಿ ಇದೂ ಸೇರಿತ್ತು ಎಂದು ಮಂದರ್ ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ಕ್ರಮದ ಹೊರತಾಗಿಯೂ ಸಂಸ್ಥೆಯು ತನ್ನ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಿದೆ ಎಂದರು.

‘2020ರ ದಿಲ್ಲಿ ಹಿಂಸಾಚಾರ ಮತ್ತು ಮಣಿಪುರದಲ್ಲಿ ಜನಾಂಗೀಯ ಸಂಘರ್ಷದಲ್ಲಿ ಸಂತ್ರಸ್ತರು ಸೇರಿದಂತೆ ದೇಶಾದ್ಯಂತ ಭಾರೀ ಸಂಖ್ಯೆಯ ಹಿಂಸಾಚಾರ ಪೀಡಿತ ಜನರೊಂದಿಗೆ ನಾವು ಕೆಲಸ ಮಾಡಿದ್ದೇವೆ. ಆದಾಯ ತೆರಿಗೆ ಇಲಾಖೆಯ ಕ್ರಮವು ನಮ್ಮ ದಾರಿಗೆ ಅಡ್ಡಿಯನ್ನುಂಟು ಮಾಡಲು ನಾವು ಅವಕಾಶ ನೀಡುವುದಿಲ್ಲ’ ಎಂದರು.

ಅಮನ್ ಬಿರಾದರಿಯನ್ನು ಅದರ ವೆಬ್‌ಸೈಟ್‌ನಲ್ಲಿ ‘ಜಾತ್ಯತೀತ,ಶಾಂತಿಯುತ, ನ್ಯಾಯಯುತ ಮತ್ತು ಮಾನವೀಯ ಜಗತ್ತಿಗಾಗಿ ಜನರ ಅಭಿಯಾನ’ ಎಂದು ಬಣ್ಣಿಸಲಾಗಿದೆ.

ಮಾರ್ಚ್ 2023ರಲ್ಲಿ ಕೇಂದ್ರ ಗೃಹಸಚಿವಾಲಯವು ಅಮನ್ ಬಿರಾದರಿಯಿಂದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯ ಉಲ್ಲಂಘನೆಯ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಬಿಐಗೆ ಶಿಫಾರಸು ಮಾಡಿತ್ತು.

ಫೆಬ್ರವರಿಯಲ್ಲಿ ಸಿಬಿಐ ಮಂದರ್ ಅವರ ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್’ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿತ್ತು.

ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ಎಫ್‌ಸಿಆರ್‌ಎ ಉಲ್ಲಂಘಿಸಿ ತನ್ನ ವಿದೇಶಿ ದೇಣಿಗೆ ನಿಯಂತ್ರಣ ಖಾತೆಯಿಂದ ವೇತನ ಮತ್ತು ಸಂಭಾವನೆಗಳನ್ನು ಹೊರತುಪಡಿಸಿ 32.7 ಲಕ್ಷ ರೂ.ಗಳನ್ನು ‘ವ್ಯಕ್ತಿಗಳ ಖಾತೆಗಳಿಗೆ’ ವರ್ಗಾಯಿಸಿದೆ ಎಂದು ಸಿಬಿಐ ಆರೋಪಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News