ಇಂಡಿಯಾ ಮೈತ್ರಿಕೂಟವು ದೇಶದ ಶೇ.60ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ:ರಾಹುಲ್ ಗಾಂಧಿ

Update: 2023-10-17 17:07 GMT

Photo: PTI

ಐಜ್ವಾಲ್: ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ದೇಶದ ಶೇ.60ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ. ಇದು ಬಿಜೆಪಿಗಿಂತ ಅಧಿಕವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದರು.

ತನ್ನ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಮಿಜೋರಾಂಗೆ ಭೇಟಿ ನೀಡಿರುವ ರಾಹುಲ್ ರಾಜಧಾನಿ ಐಜ್ವಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪ್ರತಿಪಕ್ಷಗಳ ಒಕ್ಕೂಟವು ದೇಶದ ಮೌಲ್ಯಗಳು ಮತ್ತು ಸಾಂವಿಧಾನಿಕ ಚೌಕಟ್ಟನ್ನು, ಧರ್ಮ ಅಥವಾ ಸಂಸ್ಕೃತಿಯನ್ನು ಪರಿಗಣಿಸದೆ ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳುವ ಮತ್ತು ಸೌಹಾರ್ದದಿಂದ ಬದುಕುವ ಜನರ ಸ್ವಾತಂತ್ರ್ಯವನ್ನು ರಕ್ಷಿಸುವ ಮೂಲಕ ‘ಭಾರತದ ಪರಿಕಲ್ಪನೆ’ಯನ್ನು ಸಂರಕ್ಷಿಸಲಿದೆ ಎಂದು ಅವರು ಹೇಳಿದರು.

40 ಸದಸ್ಯಬಲದ ಮಿಜೋರಾಂ ವಿಧಾನಸಭೆಗೆ ನ.7ರಂದು ಚುನಾವಣೆಗಳು ನಡೆಯಲಿವೆ.

ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಗುರು ಆರೆಸ್ಸೆಸ್ ವಿರುದ್ಧ ದಾಳಿ ನಡೆಸಿದ ರಾಹುಲ್,‘ದೇಶಕ್ಕಾಗಿ ಅವರ ದೃಷ್ಟಿಯು ನಮಗಿಂತ ಭಿನ್ನವಾಗಿದೆ. ಭಾರತವು ಒಂದೇ ಸಿದ್ಧಾಂತ ಮತ್ತು ಸಂಘಟನೆಯಿಂದ ಆಳಲ್ಪಡಬೇಕು ಎನ್ನುವುದು ಆರೆಸ್ಸೆಸ್‌ನ ನಂಬಿಕೆಯಾಗಿದೆ ಮತ್ತು ಇದನ್ನೇ ನಾವು ವಿರೋಧಿಸುತ್ತಿದ್ದೇವೆ. ನಾವು ವಿಕೇಂದ್ರೀಕರಣದಲ್ಲಿ ನಂಬಿಕೆಯನ್ನು ಹೊಂದಿದ್ದರೆ ಎಲ್ಲ ನಿರ್ಣಯಗಳನ್ನು ದಿಲ್ಲಿಯಲ್ಲಿಯೇ ತೆಗೆದುಕೊಳ್ಳಬೇಕು ಎಂದು ಬಿಜೆಪಿಯು ನಂಬಿಕೊಂಡಿದೆ ’ಎಂದರು.

ದೇಶದ ಬುನಾದಿಯ ಸ್ಥಾಪನೆಯಲ್ಲಿ ಕಾಂಗ್ರೆಸ್ ನಿರ್ಣಾಯಕ ಪಾತ್ರವನ್ನು ವಹಿಸಿತ್ತು ಮತ್ತು ಅದನ್ನು ರಕ್ಷಿಸಿದ ಇತಿಹಾಸವನ್ನು ಹೊಂದಿದೆ ಎಂದ ಅವರು, ಬಿಜೆಪಿಯು ದೇಶದ ಸಾಂಸ್ಥಿಕ ಸ್ವರೂಪದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಈಶಾನ ಭಾರತದಲ್ಲಿಯ ವಿವಿಧ ರಾಜ್ಯಗಳು ಬಿಜೆಪಿ ಮತ್ತು ಆರೆಸ್ಸೆಸ್‌ನಿಂದ ದಾಳಿಗಳನ್ನು ಎದುರಿಸುತ್ತಿವೆ ಮತ್ತು ಅವು ಜನರ ಧಾರ್ಮಿಕ ನಂಬಿಕೆಗಳ ಬುನಾದಿಗಳಿಗೆ ಅಪಾಯವಾಗಿದೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News