ಚುನಾವಣಾ ರಾಜ್ಯಗಳಲ್ಲಿ INDIA ಮೈತ್ರಿಕೂಟ ಅಳಿಸಿ ಹೋಗಲಿದೆ: ಪ್ರಧಾನಿ ಮೋದಿ
ಹೈದರಾಬಾದ್: ಈಗಾಗಲೇ ಮತದಾನ ನಡೆದಿರುವ ಛತ್ತೀಸ್ ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ INDIA ಮೈತ್ರಿಕೂಟ ಅಳಿಸಿ ಹೊಗಲಿದೆ ಎಂದು ರವಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತೆಲಂಗಾಣದ ತೂಪ್ರನ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಈಗಾಗಲೇ ಮತದಾನ ಮುಕ್ತಾಯಗೊಂಡಿರುವ ಮೂರು ರಾಜ್ಯಗಳಲ್ಲಿ ತಾವು ನಡೆಸಿದ ಪ್ರಚಾರ ಅಭಿಯಾನವನ್ನು ಸ್ಮರಿಸಿಕೊಂಡರು.
“ಮೂರು ರಾಜ್ಯಗಳಲ್ಲಿ INDIA ಮೈತ್ರಿಕೂಟ ಅಳಿಸಿ ಹೋಗಲಿರುವುದನ್ನು ನಾನು ಕಂಡೆ. ಮಹಿಳೆಯರು ಹಾಗೂ ರೈತರು ಕಾಂಗ್ರೆಸ್ ಪಕ್ಷವನ್ನು ಬುಡಮೇಲು ಮಾಡಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಆರ್ ಎಸ್ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತೆಲಂಗಾಣಕ್ಕೆ ಜನರನ್ನು ಭೇಟಿಯಾಗದ ಮುಖ್ಯಮಂತ್ರಿಯ ಅವಶ್ಯಕತೆ ಇದೆಯೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಥವಾ ಬಿಆರ್ ಎಸ್ ನ ಗುರುತು ಭ್ರಷ್ಟಾಚಾರ, ಪರಿವಾರವಾದ ಹಾಗೂ ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿದೆ ಹಾಗೂ ಅವರಿಬ್ಬರೂ ಪರಸ್ಪರ ನಕಲು ಪ್ರತಿಗಳಾಗಿದ್ದಾರೆ ಎಂದು ಅವರು ಆರೋಪಿಸಿದರು.
“ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರೂ ಒಂದೇ ಆಗಿದ್ದು ಅವರ ಬಗ್ಗೆ ಎಚ್ಚರದಿಂದಿರಿ” ಎಂದು ಪ್ರಧಾನಿ ಮೋದಿ ತೆಲಂಗಾಣ ಜನತೆಗೆ ಮನವಿ ಮಾಡಿದರು.