‘ಇಂಡಿಯಾ’ ಮೈತ್ರಿಕೂಟವು 300 ಸ್ಥಾನಗಳನ್ನು ಗೆಲ್ಲಲಿದೆ: ಡಿಕೆ ಶಿವಕುಮಾರ್

Update: 2024-05-17 17:48 GMT

ಡಿಕೆ ಶಿವಕುಮಾರ್ | PC : ANI 

ಲಕ್ನೋ: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಸುಮಾರು 300 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ ಎನ್ಡಿಎ ಒಕ್ಕೂಟವು ಕೇವಲ 200 ಸ್ಥಾನಗಳನ್ನಷ್ಟೇ ಪಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಭವಿಷ್ಯ ನುಡಿದಿದ್ದಾರೆ.

ಉತ್ತರಪ್ರದೇಶದ ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ನಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿರಿಸಿದ್ದೇವೆ. ನಾವು ಚುನಾವಣೆಗಳನ್ನು ಗೆಲ್ಲಲಿದ್ದೇವೆ ಹಾಗೂ ಒಟ್ಟಾಗಿ ಚರ್ಚಿಸಿ, ಸರಕಾರವನ್ನು ರಚಿಸಲಿದ್ದೇವೆ’’ ಎಂದು ಶಿವಕುಮಾರ್ ತಿಳಿಸಿದರು.

‘‘ಈ ಹಿಂದೆ ಯುಪಿಎ ಅಧಿಕಾರಕ್ಕೆ ಬಂದಾಗ, ಮೈತ್ರಿಕೂಟದ ಎಲ್ಲಾ ಲೋಕಸಭಾ ಸದಸ್ಯರು ಸೋನಿಯಾಗಾಂಧಿ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಈ ಬಗ್ಗೆ ನಾವು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೂ ಪತ್ರವನ್ನು ಬರೆದಿದ್ದೆವು. ಆದರೆ ದೇಶವನ್ನು ರಕ್ಷಿಸಲು ಓರ್ವ ಸಿಖ್ ವ್ಯಕ್ತಿ, ಅರ್ಥಶಾಸ್ತ್ರಜ್ಞ (ಡಾ.ಮನಮೋಹನ್ ಸಿಂಗ್) ಪ್ರಧಾನಿಯಾಗಬೇಕೆಂದು ಸೋನಿಯಾ ನಿರ್ಧರಿಸಿದ್ದರು ಎಂದರು.

‘ದೇಶವನ್ನು ಕಾಡುತ್ತಿರುವ ಕಪ್ಪುಹಣ, ರೈತರ ಆದಾಯ ಹಾಗೂ ನಿರುದ್ಯೋಗಕ್ಕೆ ಆ ಪಕ್ಷವು ಹೊಣೆಗಾರನಾಗಿದೆ‘ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಜನತೆ ಕೇಳುವ ಪ್ರಶ್ನೆಗಳಿಗೆ ಬಿಜೆಪಿಯು ಉತ್ತರಿಸಬೇಕಾಗಿದೆ. ಅದು ಹಿಂದೆ ತರುವುದಾಗಿ ಹೇಳಿಕೊಳ್ಳುತ್ತಿರುವ ಕಪ್ಪುಹಣವು ಈಗ ಎಲ್ಲಿದೆ?. ಬಿಜೆಪಿ ಭರವಸೆ ನೀಡಿದಂತೆ ರೈತರ ಆದಾಯ ಯಾಕೆ ದ್ವಿಗುಣಗೊಂಡಿಲಲ್ಲ. ನಮ್ಮ ಯುವಜನರಿಗೆ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಈಗ ಎಲ್ಲಿ ಹೋದವು‘ ಎಂದವರು ಪ್ರಶ್ನಿಸಿದರು.

‘‘ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೇರಿದ ಮೊದಲ ದಿನವೇ 5 ಗ್ಯಾರಂಟಿಗಳನ್ನು ಘೋಷಿಸಿತು. ಮೊದಲ ತಿಂಗಳೊಳಗೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿತು. ಜನರು ಯಾರು ಭರವಸೆಗಳನ್ನು ಈಡೇರಿಸುತ್ತಾರೋ ಅವರಿಗೆ ಮತ ಹಾಕುತ್ತಾರೆ. ಭಾರತದಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಅದನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News