ಶೀಘ್ರ ದೇಶ ತೊರೆಯುವಂತೆ ನೈಜರ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ
ಹೊಸದಿಲ್ಲಿ: ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಆಫ್ರಿಕಾದ ನೈಜರ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ. ಆಫ್ರಿಕನ್ ದೇಶದಲ್ಲಿನ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಎಲ್ಲಾ ಭಾರತೀಯ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ನೈಜರ್ ತೊರೆಯುವಂತೆ ಭಾರತ ಸರ್ಕಾರ ಶುಕ್ರವಾರ ಸಲಹೆ ನೀಡಿದೆ.
ಪರಿಸ್ಥಿತಿ ಸಹಜವಾಗುವವರೆಗೆ ತಮ್ಮ ಪ್ರಯಾಣದ ಯೋಜನೆಗಳನ್ನು ಮರುಪರಿಶೀಲಿಸುವಂತೆ ಭಾರತೀಯ ಪ್ರಜೆಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಸಹ ಸಲಹೆ ನೀಡಿದೆ.
“ಭಾರತ ಸರ್ಕಾರವು ನೈಜರ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ತಮ್ಮ ಉಪಸ್ಥಿತಿಯು ತೀರಾ ಅನಿವಾರ್ಯವಲ್ಲದ ಭಾರತೀಯ ಪ್ರಜೆಗಳು ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ. ಈಗ ವಾಯು ಸಂಚಾರವನ್ನು ಮುಚ್ಚಲಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭೂ ಗಡಿಯ ಮೂಲಕ ತೆರಳುವಾಗ, ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು" ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿ ಸಂಸ್ಥೆ ANI ಗೆ ಹೇಳಿದ್ದಾರೆ.
"ಮುಂದಿನ ದಿನಗಳಲ್ಲಿ ನೈಜರ್‌ಗೆ ಪ್ರಯಾಣಿಸಲು ಯೋಜಿಸುವವರಿಗೂ ಇದೇ ರೀತಿ ಸಲಹೆ ನೀಡಲಾಗುತ್ತದೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಅವರ ಪ್ರಯಾಣದ ಯೋಜನೆಗಳನ್ನು ಮರುಪರಿಶೀಲಿಸಲಿ " ಎಂದು ಅವರು ಹೇಳಿದರು.
ಜುಲೈ 26 ರಂದು, ನೈಜರ್‌ನ ಅಧ್ಯಕ್ಷ ಮುಹಮ್ಮದ್ ಬಾಜೂಮ್ ಅವರ ಮನೆಯನ್ನು ಸುತ್ತುವರೆದ ದಂಗೆಕೋರ ಸೈನಿಕರು, ಅಧ್ಯಕ್ಷರನ್ನು ಪದಚ್ಯುತಗೊಳಿಸಿ, ಅಧಿಕಾರವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಮಾತುಕತೆಗೆ ಕೂಡಾ ಸಿದ್ದರಿಲ್ಲದ ಬಂಡುಕೋರರರು, ಅಧ್ಯಕ್ಷರನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ನೈಜರ್‌ನಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು Economic Community of West African States (ECOWAS) ಸೈನ್ಯವನ್ನು ನಿಯೋಜಿಸಲು ಆದೇಶಿಸಿದೆ. ಇದರಿಂದ ನೈಜರ್‌ನ ಹೊಸ ಮಿಲಿಟರಿ ಆಡಳಿತ ಮತ್ತು ಪಶ್ಚಿಮ ಆಫ್ರಿಕಾದ ಪ್ರಾದೇಶಿಕ (ECOWAS) ಬಣದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.