ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿಗೆ ‘INDIA’ ನಿರ್ಧಾರ
2024ರ ಲೋಕಸಭಾ ಚುನಾವಣೆಯನ್ನು ಎಷ್ಟು ಸಾಧ್ಯವೊ ಅಷ್ಟು ಒಗ್ಗಟ್ಟಾಗಿ ಎದುರಿಸುವ ನಿರ್ಧಾರಕ್ಕೆ ‘INDIA’ ಬಂದಿದೆ. ರಾಜ್ಯ ಮಟ್ಟದ ಸೀಟು ಹಂಚಿಕೆ ವ್ಯವಸ್ಥೆಯನ್ನು ‘ಕೊಡು-ಕೊಳ್ಳುವ’ ಸ್ಫೂರ್ತಿಯೊಂದಿಗೆ ಆದಷ್ಟೂ ಶೀಘ್ರವಾಗಿ ಅಂತಿಮಗೊಳಿಸಲಾಗುವುದು ಎಂದು ಅದು ಪ್ರತಿಪಾದಿಸಿದೆ
ಮುಂಬೈ; 2024ರ ಲೋಕಸಭಾ ಚುನಾವಣೆಯನ್ನು ಎಷ್ಟು ಸಾಧ್ಯವೊ ಅಷ್ಟು ಒಗ್ಗಟ್ಟಾಗಿ ಎದುರಿಸುವ ನಿರ್ಧಾರಕ್ಕೆ ‘INDIA’ ಬಂದಿದೆ. ರಾಜ್ಯ ಮಟ್ಟದ ಸೀಟು ಹಂಚಿಕೆ ವ್ಯವಸ್ಥೆಯನ್ನು ‘ಕೊಡು-ಕೊಳ್ಳುವ’ ಸ್ಫೂರ್ತಿಯೊಂದಿಗೆ ಆದಷ್ಟೂ ಶೀಘ್ರವಾಗಿ ಅಂತಿಮಗೊಳಿಸಲಾಗುವುದು ಎಂದು ಅದು ಪ್ರತಿಪಾದಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅವಧಿಗಿಂತ ಮುಂಚಿತವಾಗಿ ಚುನಾವಣೆಯ ಸಾಧ್ಯತೆ ಹಾಗೂ ‘ಒಂದು ದೇಶ, ಒಂದು ಚುನಾವಣೆ’ಯ ಸಾಧ್ಯತೆಯನ್ನು ಶೋಧಿಸಲು ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂಬ ಭಾರಿ ವದಂತಿಗಳ ನಡುವೆಯೇ, ಮೈತ್ರಿಕೂಟದ ಉನ್ನತ ನಿರ್ಣಯ ಕೈಗೊಳ್ಳಲು ಹಾಗೂ ಸೀಟು ಹಂಚಿಕೆ ಕುರಿತು ಕೆಲಸ ಪ್ರಾರಂಭಿಸಲು 14 ಸದಸ್ಯರ ಸಮಿತಿಯನ್ನು ರಚಿಸುವ ಮಹತ್ವದ ನಿರ್ಧಾರವನ್ನು ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕರು ಕೈಗೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಮೂರನೆಯ ಸಭೆಯಲ್ಲಿ ಗೊತ್ತುವಳಿಯೊಂದನ್ನು ಅಂಗೀಕರಿಸಿದ INDIA ಮೈತ್ರಿಕೂಟವು, ವಿವಿಧ ರಾಜ್ಯಗಳ ಸೀಟು ಹಂಚಿಕೆ ವ್ಯವಸ್ಥೆಗೆ ಕೂಡಲೇ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರ ಒಳಗೆ ಸೀಟು ಹಂಚಿಕೆ ಪ್ರಕ್ರಿಯೆಯು ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಎನ್‍ಸಿಪಿ ವರಿಷ್ಠ ಶರದ್ ಪವಾರ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ, ಪಶ‍್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತಿತರರು ಭಾಗವಹಿಸಿದ್ದರು.
ಚರ್ಚೆಯ ಸಂದರ್ಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಖ್ ಅಬ್ದುಲ್ಲಾ ಮತ್ತು ಓಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ.ರಾಜಾ, ಸಿಪಿಐ(ಎಂಎಲ್) ನಾಯಕ ದೀಪಾಂಕರ್ ಭಟ್ಟಾಚಾರ್ಯ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಸ್ವತಂತ್ರ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹಾಗೂ ಆರ್‍ಎಲ್‍ಡಿ ನಾಯಕ ಜಯಂತ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.