ಮೇ 10ರ ಗಡುವಿಗೂ ಮುಂಚಿತವಾಗಿಯೇ ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದ ಭಾರತ: ಮಾಲ್ದೀವ್ಸ್
ಮಾಲೆ: ಅಧ್ಯಕ್ಷ ಮುಹಮ್ಮದ್ ಮುಯಿಝು ವಿಧಿಸಿದ್ದ ಮೇ 10ರ ಗಡುವಿಗೂ ಮುಂಚಿತವಾಗಿಯೇ ಭಾರತವು ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಚೀನಾ ಪರ ನಾಯಕರೆಂದು ವ್ಯಾಪಕವಾಗಿ ಬಿಂಬಿಸಲ್ಪಟ್ಟಿರುವ ಮುಯಿಝು, ಭಾರತವು ತಮ್ಮ ದೇಶದಿಂದ ಮೇ 10ರೊಳಗೆ ತನ್ನೆಲ್ಲ ಯೋಧರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಗಡುವು ವಿಧಿಸಿದ್ದರು. ಕಳೆದ ವರ್ಷ ನಡೆದಿದ್ದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ದ್ವೀಪ ರಾಷ್ಟ್ರದಲ್ಲಿ ಬೀಡು ಬಿಟ್ಟಿರುವ ಸುಮಾರು 90 ಮಂದಿ ಭಾರತೀಯ ಸೇನಾ ಸಿಬ್ಬಂದಿಗಳನ್ನು ದೇಶದಿಂದ ಹೊರಗೆ ಕಳಿಸಲಾಗುವುದು ಎಂಬುದು ಮುಯಿಝು ಅವರ ಪ್ರಮುಖ ವಾಗ್ದಾನವಾಗಿತ್ತು.
Sun.mv ಸುದ್ದಿ ಪೋರ್ಟಲ್ ನೊಂದಿಗೆ ಮಾತನಾಡಿರುವ ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್, ದೇಶದಲ್ಲಿ ಬೀಡು ಬಿಟ್ಟಿದ್ದ ಭಾರತೀಯ ಯೋಧರ ಕೊನೆಯ ತಂಡವು ದೇಶದಿಂದ ನಿರ್ಗಮಿಸಿದೆ ಎಂದು ತಿಳಿಸಿದ್ದಾರೆ. ಹೀಗಿದ್ದೂ, ಅವರು ಮಾಲ್ದೀವ್ಸ್ ನಿಂದ ಒಟ್ಟು ಎಷ್ಟು ಮಂದಿ ಭಾರತೀಯ ಯೋಧರು ನಿರ್ಗಮಿಸಿದ್ದಾರೆ ಎಂಬ ನಿಖರ ಸಂಖ್ಯೆಯನ್ನು ಒದಗಿಸಿಲ್ಲ. ಮಾಲ್ದೀವ್ಸ್ ನಲ್ಲಿದ್ದ ಭಾರತೀಯ ಯೋಧರ ಸಂಖ್ಯೆಯ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ದ್ವೀಪ ರಾಷ್ಟ್ರಕ್ಕೆ ಭಾರತವು ನೀಡಿದ್ದ ಎರಡು ಹೆಲಿಕಾಪ್ಟರ್ ಗಳು ಹಾಗೂ ಡಾರ್ನಿಯರ್ ವಿಮಾನವನ್ನು ನಿರ್ವಹಿಸಲು ಭಾರತೀಯ ಸೇನಾ ತುಕಡಿಗಳನ್ನು ಮಾಲ್ದೀವ್ಸ್ ನಲ್ಲಿ ನಿಯೋಜಿಸಲಾಗಿತ್ತು.