ಮುಂಬೈಯಲ್ಲಿ ಆ.31-ಸೆ.1ರಂದು ‘ಇಂಡಿಯಾ’ ಸಮಾವೇಶ
ಮುಂಬೈ: ‘ಇಂಡಿಯಾ’ ಪ್ರತಿಪಕ್ಷ ಮೈತ್ರಿಕೂಟದ ಮೂರನೇ ಸಭೆಯು ಮಂಬೈನಲ್ಲಿ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಎರಡು ದಿನಗಳ ಕಾಲ ನಡೆಯಲಿದೆಯೆಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಶನಿವಾರ ತಿಳಿಸಿದರು.
ಸಭೆಯಲ್ಲಿ ಪಾಲ್ಗೊಳ್ಳುವಂತೆ ರಾಜಕೀಯ ಪಕ್ಷಗಳನ್ನು ಆಹ್ವಾನಿಸುವ ಪ್ರಕ್ರಿಯೆಗಳು ಮತ್ತಿತರ ಏರ್ಪಾಡುಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆಯೆಂದು ಪಟೋಲೆ ತಿಳಿಸಿದರು.
ಮೋದಿ ಉಪನಾಮ ಕುರಿತಾದ ಹೇಳಿಕೆಗೆ ಸಂಬಂಧಿಸಿದ 2019ರಲ್ಲಿ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿಯೆಂದು ಪರಿಗಣಿಸಿದ ಗುಜರಾತ್ ನ್ಯಾಯಾಲಯದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈ ಸಭೆಯು ಹೆಚ್ಚಿನ ಮಹತ್ವವನ್ನು ಪಡೆದಿದೆಯೆಂದು ಪಟೋಲೆ ಹೇಳಿದರು.
ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ನಮ್ಮೆಂದಿಗಿರುವುದು ಅತ್ಯಂತ ಮಹತ್ವದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದಿದ್ದೇವೆ ಎಂದು ಪಟೋಲೆ ಹೇಳಿದರು.
ಈ ಮಧ್ಯೆ ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಅವರು ಹೇಳಿಕೆಯೊಂದನ್ನು ನೀಡಿ, ಐದು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಸಮಾವೇಶಕ್ಕೆ ಆಗಮಿಸಲಿರುವ ಪ್ರತಿಪಕ್ಷ ನಾಯಕರಿಗೆ ಆಗಸ್ಟ್ 31ರಂದು ಉದ್ಧವ್ ಠಾಕ್ರೆ ಅವರು ಭೋಜನಕೂಟವನ್ನು ಆಯೋಜಿಸಲಿದ್ದರೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶವು ಮುಂಬೈನ ಹೊರವಲಯದಲ್ಲಿರುವ ಗ್ರಾಂಡ್ ಹಯಾಟ್ ಹೊಟೇಲ್ನಲ್ಲಿ ನಡೆಯಲಿದೆ.
ಪ್ರತಿಪಕ್ಷ ಮೈತ್ರಿಕೂಟದ ಮೊದಲ ಸಭೆಯು ಬಿಹಾರದ ಪಾಟ್ನಾದಲ್ಲಿ ಜೂನ್ 23ರಂದು ನಡೆದಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಾಲಕರಾಗಿದ್ದರು.
ಎರಡನೇ ಸಭೆಯು ಜುಲೈ 18ರಂದು ಬೆಂಗಳೂರಿನಲ್ಲಿ ನಡೆದಿದ್ದು, ಪ್ರತಿಪಕ್ಷ ಮೈತ್ರಿಕೂಟಕ್ಕೆ ‘ಇಂಡಿಯನ್ ನ್ಯಾಶನಲ್ ಡೆವಲ್ಮೆಂಟಲ್ ಇನ್ಕ್ಲೂಸಿವ್ ಅಲಯನ್ಸ್ ’( ಭಾರತೀಯ ರಾಷ್ಟ್ರೀಯ ಅಭಿವೃದ್ಧಿಗಾಗಿ ಒಳಗೊಳ್ಳುವಿಕೆಯ ಒಕ್ಕೂಟ) ಎಂಬ ಆಂಗ್ಲಪದದ ಸಂಕ್ಷಿಪ್ತರೂಪವಾಗಿ ಇಂಡಿಯಾ ಎಂದು ನಾಮಕರಣಗೊಳಿಸಲಾಗಿತ್ತು.
2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಉದ್ದೇಶದಿಂದ ಈ ಮೈತ್ರಿಕೂಟ ರಚನೆಯಾಗಿದೆ.