ಫೆಲೆಸ್ತೀನ್ ಮೇಲೆ ಆಕ್ರಮಣ ಮಾಡುತ್ತಿರುವ ಇಸ್ರೇಲ್‌ಗೆ ಭಾರತದಿಂದ ರಾಕೆಟ್‌ಗಳು, ಸ್ಫೋಟಕಗಳ ರಫ್ತು : ದಾಖಲೆಗಳಿಂದ ಬಹಿರಂಗ
ಹೊಸದಿಲ್ಲಿ: ಫೆಲೆಸ್ತೀನೀಯರ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್‌ಗೆ ಭಾರತವು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು aljazeera.com ವರದಿ ಮಾಡಿದೆ.
‘ಬೋರ್ಕಮ್’ ಎಂಬ ಹಡಗು ಮೇ ತಿಂಗಳಲ್ಲಿ 20 ಟನ್ ರಾಕೆಟ್ ಇಂಜಿನ್‌ಗಳು, 12.5 ಟನ್ ಸ್ಫೋಟಕಗಳನ್ನು ಹೊಂದಿದ್ದ ರಾಕೆಟ್‌ಗಳು, 1500 ಕೆಜಿ ಸ್ಫೋಟಕಗಳು ಮತ್ತು 740 ಕೆಜಿ ಫಿರಂಗಿಗಳಲ್ಲಿ ಬಳಸುವ ಸ್ಫೋಟಕಗಳು ಮತ್ತು ಪ್ರೊಪೆಲಂಟ್‌ಗಳನ್ನು ಇಸ್ರೇಲ್‌ಗೆ ಸಾಗಿಸಿದೆ ಎಂದು ಇಸ್ರೇಲ್ ಫೆಲೆಸ್ತೀನ್‌ನಲ್ಲಿ ನಡೆಸುತ್ತಿರುವ ಯುದ್ಧದ ವಿರುದ್ಧ ಅಭಿಯಾನ ನಡೆಸುತ್ತಿರುವ ‘ಸಾಲಿಡಾರಿಟಿ ನೆಟ್‌ವರ್ಕ್ ಅಗೆನ್‌ಸ್ಟ್ ದ ಫೆಲೆಸ್ತೀನಿಯನ್ ಒಕ್ಯುಪೇಶನ್ (ಆರ್‌ಇಎಸ್‌ಸಿಒಪಿ) ಆರೋಪಿಸಿದೆ.
ಮೇ 15ರ ಮುಂಜಾನೆ ಸರಕು ಹಡಗು ‘ಬೋರ್ಕಮ್’ ಸ್ಪೇನ್ ಕರಾವಳಿಯಲ್ಲಿ ಕಾರ್ಟಗೆನ ನಗರದಿಂದ ಸ್ವಲ್ಪ ದೂರದಲ್ಲಿ ನಿಂತಿತ್ತು. ಆಗ ಬಂದರಿನಲ್ಲಿ ಪ್ರತಿಭಟನಕಾರರು ಫೆಲೆಸ್ತೀನ್ ಧ್ವಜಗಳನ್ನು ಹಿಡಿದುಕೊಂಡು ಹಡಗಿನ ವಿರುದ್ಧ ಪ್ರತಿಭಟನೆ ನಡೆಸಿದರು. ಹಡಗು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದೆ ಎಂದು ಆರೋಪಿಸಿದ ಅವರು ಹಡಗನ್ನು ಪರಿಶೀಲನೆ ನಡೆಸುವಂತೆ ಸ್ಪೇನ್ ಅಧಿಕಾರಿಗಳನ್ನು ಒತ್ತಾಯಿಸಿದರು ಎಂದು ‘ಅಲ್ ಜಝೀರ’ ಹೇಳಿದೆ.
ಆದರೆ, ಈ ವಿಷಯದಲ್ಲಿ ಸ್ಪೇನ್ ಸರಕಾರ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೊದಲೇ, ಹಡಗು ತನ್ನ ಯೋಜಿತ ನಿಲುಗಡೆಯನ್ನು ರದ್ದುಗೊಳಿಸಿ ಸ್ಲೊವೇನಿಯ ಬಂದರು ಕೋಪರ್‌ನತ್ತ ಸಾಗಿತು.
ಆ ಹಡಗಿನಲ್ಲಿ ಭಾರತದಲ್ಲಿ ತುಂಬಿಸಲಾಗಿರುವ ಸ್ಫೋಟಕಗಳಿದ್ದವು. ಅದು ಇಸ್ರೇಲ್‌ನ ಅಶ್ಡೋಡ್ ಬಂದರಿನತ್ತ ಸಾಗುತ್ತಿತ್ತು ಎನ್ನುವುದನ್ನು ತೋರಿಸುವ ದಾಖಲೆಗಳನ್ನು ತಾನು ನೋಡಿರುವುದಾಗಿ ಅಲ್ ಜಝೀರ ಹೇಳಿದೆ. ಅಶ್ಡೋಡ್ ಬಂದರು ಫೆಲೆಸ್ತೀನ್‌ನ ಗಾಝಾ ಪಟ್ಟಿಯಿಂದ ಕೇವಲ 30 ಕಿ.ಮೀ. ದೂರದಲ್ಲಿದೆ.
ಹಡಗು ಎಪ್ರಿಲ್ 2ರಂದು ಚೆನ್ನೈಯಿಂದ ಹೊರಟಿರುವುದನ್ನು ಹಡಗುಗಳ ಚಲನವಲನಗಳ ಮೇಲೆ ನಿಗಾ ಇಡುವ ವೆಬ್‌ಸೈಟ್‌ಗಳು ತೊರಿಸಿವೆ. ಕೆಂಪು ಸಮುದ್ರದ ಮೂಲಕ ಹಾದು ಹೋಗುವುದನ್ನು ತಪ್ಪಿಸುವುದಕ್ಕಾಗಿ ಆ ಹಡಗು ಆಫ್ರಿಕಾ ಖಂಡವನ್ನು ಸುತ್ತು ಬಳಸಿ ಪ್ರಯಾಣಿಸಿತು. ಇಸ್ರೇಲ್ ಫೆಲೆಸ್ತೀನ್ ಮೇಲೆ ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ, ಯೆಮನ್‌ನ ಹೌದಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದರು.
ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ ರಹಸ್ಯ ಕಾಪಾಡುವುದಕ್ಕೆ ಸಂಬಂಧಿಸಿದ ಒಂದು ದಾಖಲೆಯಿತ್ತು. ಎಲ್ಲಾ ಉದ್ಯೋಗಿಗಳು, ಸಲಹಾಗಾರರು ಮತ್ತು ಸಂಬಂಧಿತ ಇತರ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿ ಐಎಮ್‌ಐ ಸಿಸ್ಟಮ್ಸ್ ಅಥವಾ ಇಸ್ರೇಲ್‌ನ ಹೆಸರನ್ನು ಹೇಳಬಾರದು ಎಂಬುದಾಗಿ ಆ ದಾಖಲೆ ಸ್ಪಷ್ಟಪಡಿಸುತ್ತದೆ.
ರಕ್ಷಣಾ ಕಂಪೆನಿ ಐಎಮ್‌ಐ ಸಿಸ್ಟಮ್ಸ್ ಅನ್ನು ಇಸ್ರೇಲ್‌ನ ಅತಿ ದೊಡ್ಡ ಶಸ್ತ್ರಾಸ್ತ್ರ ತಯಾರಕ ಕಂಪೆನಿ ಎಲ್ಬಿಟ್ ಸಿಸ್ಟಮ್ಸ್ 2018ರಲ್ಲಿ ಖರೀದಿಸಿತ್ತು.
ಭಾರತದಿಂದ ಹೊರಟ ಎರಡನೇ ಸರಕು ಹಡಗಿಗೆ ಕಾರ್ಟಗ್ನ ಬಂದರಿನಲ್ಲಿ ಮೇ 21ರಂದು ಪ್ರವೇಶ ನಿರಾಕರಿಸಲಾಯಿತು ಎನ್ನಲಾಗಿದೆ.
ಸರಕು ಹಡಗು ‘ಮರಿಯಾನ್ ಡಾನಿಕ’ ಭಾರತದ ಚೆನ್ನೈ ಬಂದರಿನಿಂದ ಇಸ್ರೇಲ್‌ನ ಹೈಫ ಬಂದರಿನತ್ತ 27 ಟನ್ ಸ್ಫೋಟಕಗಳನ್ನು ಹೇರಿಕೊಂಡು ಹೊರಟಿತ್ತು ಎಂದು ಸ್ಪೇನ್ ಪತ್ರಿಕೆ ‘ಎಲ್ ಪಾಯಿಸ್’ ವರದಿ ಮಾಡಿದೆ.
ಹಡಗು ಇಸ್ರೇಲ್‌ಗೆ ಸೇನಾ ಸರಕುಗಳನ್ನು ಪೂರೈಸುತ್ತಿದೆ ಎಂಬ ಕಾರಣಕ್ಕಾಗಿ ಅದಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಸ್ಪೇನ್‌ನ ವಿದೇಶ ವ್ಯವಹಾರಗಳ ಸಚಿವ ಜೋಸ್ ಮ್ಯಾನುಯಲ್ ಆಲ್ಬರಿಸ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದರು.
ಸಂಘರ್ಷಗಳನ್ನು ನಿವಾರಿಸಲು ಸೇನಾ ಕಾರ್ಯಾಚರಣೆಗಳ ಬದಲು ಮಾತುಕತೆಗಳನ್ನು ನಡೆಸಬೇಕೆಂದು ಭಾರತವು ಸುದೀರ್ಘ ಕಾಲದಿಂದ ಪ್ರತಿಪಾದಿಸುತ್ತಾ ಬರುತ್ತಿದೆ. ಭಾರತದಿಂದ ಶಸ್ತ್ರಾಸ್ತ್ರಗಳ ಭಾಗಗಳು ಮೌನವಾಗಿ ಇಸ್ರೇಲ್‌ಗೆ ಹೋಗುತ್ತಿವೆ ಎನ್ನುವುದನ್ನು ಈ ಘಟನೆಗಳು ಸಾಬೀತುಪಡಿಸಿವೆ. ಭಾರತದಿಂದ ಹೊರಹೋಗುವ ವಸ್ತುಗಳ ಕುರಿತಂತೆ ಇರುವ ಅಪಾರದರ್ಶಕತೆಯಿಂದಾಗಿ ಶಸ್ತ್ರಾಸ್ತ್ರಗಳು ಪರಿಶೀಲನೆಗೊಳಪಡದೆಯೇ ಇಸ್ರೇಲ್ ತಲುಪುತ್ತಿವೆ ಎಂಬ ಆತಂಕವನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ ಎಂದು ಅಲ್ ಜಝೀರ ಹೇಳಿದೆ.
ಸೌಜನ್ಯ : aljazeera.com