ಭಾರತವು ಬದಲಾಗುತ್ತಿದೆ : ಮೂರು ನೂತನ ಕ್ರಿಮಿನಲ್ ಕಾನೂನುಗಳ ಜಾರಿ ಕುರಿತು ಸಿಜೆಐ ಚಂದ್ರಚೂಡ್

Update: 2024-04-20 15:14 GMT

ಡಿ.ವೈ.ಚಂದ್ರಚೂಡ್ | PC : PTI 

ಹೊಸದಿಲ್ಲಿ: ದೇಶದಲ್ಲಿ ಮೂರು ನೂತನ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಶನಿವಾರ ಪ್ರಶಂಸಿಸಿದ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಡಿ.ವೈ.ಚಂದ್ರಚೂಡ್ ಅವರು, ಇದು ಭಾರತವು ಬದಲಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದರು. ನೂತನ ಕಾನೂನುಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಎಂದರು.

‘ಅಪರಾಧ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ಭಾರತದ ಪ್ರಗತಿಶೀಲ ಪಥ’ ಕುರಿತು ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ನ್ಯಾ.ಚಂದ್ರಚೂಡ್,‘ಸಂಸತ್ತು ಮೂರು ನೂತನ ಕ್ರಿಮಿನಲ್ ಕಾನೂನುಗಳನ್ನು ತಂದಿರುವುದು ಭಾರತವು ಬದಲಾಗುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಭಾರತವು ಮುಂದಕ್ಕೆ ಸಾಗುತ್ತಿದೆ ಮತ್ತು ನಮ್ಮ ಸಮಾಜದ ಭವಿಷ್ಯಕ್ಕಾಗಿ ಪ್ರಸ್ತುತ ಸವಾಲುಗಳನ್ನು ಎದುರಿಸಲು ನಮಗೆ ನೂತನ ಕಾನೂನು ಸಾಧನಗಳ ಅಗತ್ಯವಿದೆ. ಯಾವುದೇ ಕಾನೂನು ಅಪರಾಧ ಕಾನೂನಿನಂತೆ ನಮ್ಮ ಸಮಾಜದ ದಿನನಿತ್ಯದ ವ್ಯವಹಾರದ ಮೇಲೆ ಪರಿಣಾಮವನ್ನು ಬೀರುವುದಿಲ್ಲ, ಹೀಗಾಗಿ ಈ ನೂತನ ಕಾನೂನುಗಳ ಅನುಷ್ಠಾನವು ನಮ್ಮ ಸಮಾಜದ ಪಾಲಿಗೆ ಮಹತ್ವದ ಘಳಿಗೆಯನ್ನು ಸೂಚಿಸುತ್ತದೆ ’ಎಂದು ಹೇಳಿದರು.

ಮೂರು ನೂತನ ಕ್ರಿಮಿನಲ್ ಕಾನೂನುಗಳ ಅನುಷ್ಠಾನದೊಂದಿಗೆ ತನ್ನ ಅಪರಾಧ ನ್ಯಾಯ ವ್ಯವಸ್ಥೆಯ ಮಹತ್ವದ ನವೀಕರಣಕ್ಕೆ ಭಾರತವು ಸಜ್ಜಾಗಿದೆ ಎಂದು ಹೇಳಿದ ಅವರು, ನೂತನ ಕಾನೂನುಗಳನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತವರು ಅವುಗಳನ್ನು ಅಳವಡಿಸಿಕೊಂಡರೆ ಅವು ಯಶಸ್ವಿಯಾಗುತ್ತವೆ ಎಂದರು.

ಸಂತ್ರಸ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಅಪರಾಧಗಳ ತನಿಖೆ ಮತ್ತು ಕಾನೂನು ಕ್ರಮವನ್ನು ಕೈಗೊಳ್ಳಲು ಹೆಚ್ಚು ಅಗತ್ಯವಾಗಿದ್ದ ಸುಧಾರಣೆಗಳನ್ನು ನೂತನ ಕಾನೂನುಗಳಲ್ಲಿ ತರಲಾಗಿದೆ ಎಂದ ಅವರು, ದೇಶವು ಈ ಕಾನೂನುಗಳ ಲಾಭವನ್ನು ಪಡೆಯುವಂತಾಗಲು ಕಾರ್ಯವಿಧಾನಗಳಿಗೆ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವುದೂ ಮುಖ್ಯವಾಗಿದೆ. ಸಹಜವಾಗಿಯೇ ನಾವು ನಮ್ಮ ವಿಧಿವಿಜ್ಞಾನ ತಜ್ಞರ ಸಾಮರ್ಥ್ಯ ನಿರ್ಮಾಣಕ್ಕೆ,ತನಿಖಾಧಿಕಾರಿಗಳ ತರಬೇತಿಗೆ ಮತ್ತು ನಮ್ಮ ನ್ಯಾಯಾಲಯ ವ್ಯವಸ್ಥೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕು. ಸಾಧ್ಯವಾದಷ್ಟು ಶೀಘ್ರ ಈ ಹೂಡಿಕೆಗಳನ್ನು ಮಾಡಿದರೆ ಮಾತ್ರ ನೂತನ ಅಪರಾಧ ಕಾನೂನಿನಲ್ಲಿಯ ನಿಬಂಧನೆಗಳು ಧನಾತ್ಮಕ ಪರಿಣಾಮಗಳನ್ನುಂಟು ಮಾಡುತ್ತವೆ ’ಎಂದು ಹೇಳಿದರು.

ಮೂರು ನೂತನ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ) ಈ ವರ್ಷದ ಜು.1ರಿಂದ ಜಾರಿಗೊಳ್ಳಲಿವೆ. ಇದರೊಂದಿಗೆ ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ (ಐಪಿಸಿ),ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಸಂಸತ್ತು ಕಳೆದ ವರ್ಷದ ಡಿ.21ರಂದು ನೂತನ ಕಾನೂನುಗಳನ್ನು ಅಂಗೀಕರಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿ.25ರಂದು ಅಂಕಿತ ಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News