ಭಾರತ, ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ವಿಶ್ವ ವ್ಯಾಪಾರದ ಆಧಾರವಾಗಲಿದೆ: ಪ್ರಧಾನಿ ಮೋದಿ

Update: 2023-09-24 12:11 GMT

ನರೇಂದ್ರ ಮೋದಿ | photo: PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತಮ್ಮ ಮನ್ ಕಿ ಬಾತ್‌ನ 108 ನೇ ಸಂಚಿಕೆಯಲ್ಲಿ ಚಂದ್ರಯಾನ-3 ಹಾಗೂ ಜಿ20 ಶೃಂಗಸಭೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಾಗರಿಕರಿಂದ ತನಗೆ ಪತ್ರಗಳು ಬರುತ್ತಿದ್ದು ಅವುಗಳಲ್ಲಿ ಅತೀ ಹೆಚ್ಚು ಚಂದ್ರಯಾನ-3 ಹಾಗೂ ಜಿ20 ಶೃಂಗಸಭೆಯ ಯಶಸ್ಸಿಗೆ ಅಭಿನಂದಿಸಿರುವುದು ಇದೆ ಎಂದು ಮೋದಿ ಹೇಳಿದ್ದಾರೆ.

ಇಸ್ರೋದ ಯೂಟ್ಯೂಬ್ ಚಾನೆಲ್‌ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಚಂದ್ರಯಾನ-3 ಉಪಗ್ರಹ ಚಂದ್ರನ ಮೇಲೆ ಇಳಿಯುವುದನ್ನು ವೀಕ್ಷಿಸಿದ್ದಾರೆ ಎಂದು ಮೋದಿ ಹೇಳಿದರು.

ಇದೇ ವೇಳೆ, ಚಂದ್ರಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ 'ಚಂದ್ರಯಾನ-3 ಮಹಾಕ್ವಿಝ್‌'ನಲ್ಲಿ ಭಾಗವಹಿಸುವಂತೆ ಅವರು ಜನರಿಗೆ ಮನವಿ ಮಾಡಿದರು.

ಭಾರತ- ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ಈ ಕಾರಿಡಾರ್ ಮುಂಬರುವ ನೂರಾರು ವರ್ಷಗಳವರೆಗೆ ವಿಶ್ವ ವ್ಯಾಪಾರದ ಆಧಾರವಾಗಲಿದೆ. ಈ ಕಾರಿಡಾರ್ ಅನ್ನು ಭಾರತದ ನೆಲದಲ್ಲಿ ಪ್ರಾರಂಭಿಸಲಾಗಿದೆ ಎಂಬುದನ್ನು ಇತಿಹಾಸವು ಯಾವಾಗಲೂ ನೆನಪಿಸಿಕೊಳ್ಳುತ್ತದೆ" ಎಂದು ಹೇಳಿದರು.

ಜಿ 20 ಯುನಿವರ್ಸಿಟಿ ಕನೆಕ್ಟ್ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕಾಲೇಜು ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದಾರೆ.

ಐಐಎಮ್‌, ಐಐಟಿಗಳು, ಎನ್‌ಐಟಿಗಳು ಮತ್ತು ವೈದ್ಯಕೀಯ ಕಾಲೇಜುಗಳಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಜಿ 20 ಯುನಿವರ್ಸಿಟಿ ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 26 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸುವುದಾಗಿ ತಿಳಿಸಿದರು.

ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದೆಡೆಗಿನ ಆಕರ್ಷಣೆ ಸಾಕಷ್ಟು ಹೆಚ್ಚಿದೆ. ಜಿ-20 ಗಾಗಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾರತಕ್ಕೆ ಬಂದರು. ಅವರು ವೈವಿಧ್ಯತೆ, ವಿಭಿನ್ನ ಸಂಪ್ರದಾಯಗಳು, ವಿವಿಧ ರೀತಿಯ ಪಾಕಪದ್ಧತಿಗಳು ಮತ್ತು ನಮ್ಮ ಪರಂಪರೆಗಳ ಪರಿಚಯವನ್ನು ಪಡೆದಿದ್ದಾರೆ. ಇತ್ತೀಚೆಗೆ, ಕರ್ನಾಟಕದ ಶಾಂತಿನಿಕೇತನ ಮತ್ತು ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತದಲ್ಲಿರುವ ಒಟ್ಟು ವಿಶ್ವ ಪರಂಪರೆಯ ಆಸ್ತಿಗಳ ಸಂಖ್ಯೆ ಈಗ 42 ತಲುಪಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News