ಪರಮಾಣು ಸ್ಥಾವರಗಳ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡ ಭಾರತ, ಪಾಕ್

Update: 2024-01-01 15:27 GMT

ಸಾಂದರ್ಭಿಕ ಚಿತ್ರ | Photo :  PTI 

ಹೊಸದಿಲ್ಲಿ: ಮೂರು ದಶಕಗಳ ಸಂಪ್ರದಾಯವನ್ನು ಮುಂದುವರಿಸಿರುವ ಭಾರತ ಮತ್ತು ಪಾಕಿಸ್ತಾನ, ದ್ವಿಪಕ್ಷೀಯ ಒಪ್ಪಂದವೊಂದರ ಅನ್ವಯ ಸೋಮವಾರ ತಮ್ಮ ಪರಮಾಣು ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ.

ಈ ಒಪ್ಪಂದವು, ಈ ದೇಶಗಳು ಪರಸ್ಪರರ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸುವುದನ್ನು ಪ್ರತಿಬಂಧಿಸುತ್ತದೆ.

ಪರಮಾಣು ಸ್ಥಾವರಗಳು ಮತ್ತು ಸಂಸ್ಥಾಪನೆಗಳ ಮೇಲೆ ದಾಳಿ ನಡೆಸುವುದನ್ನು ಪ್ರತಿಬಂಧಿಸುವ ಒಪ್ಪಂದವೊಂದರ ವಿಧಿಗಳಡಿಯಲ್ಲಿ ಉಭಯ ದೇಶಗಳ ಪರಮಾಣು ಸ್ಥಾವರಗಳ ಪಟ್ಟಿಗಳ ವಿನಿಮಯ ನಡೆದಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್ ನಲ್ಲಿರುವ ರಾಜತಾಂತ್ರಿಕ ವಾಹಿನಿಗಳ ಮೂಲಕ ಏಕಕಾಲದಲ್ಲಿ ಪಟ್ಟಿಗಳ ವಿನಿಮಯ ನಡೆದಿದೆ.

‘‘ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್ ನಲ್ಲಿರುವ ರಾಜತಾಂತ್ರಿಕ ವಾಹಿನಿಗಳ ಮೂಲಕ ಭಾರತ ಮತ್ತು ಪಾಕಿಸ್ತಾನಗಳು ಏಕಕಾಲದಲ್ಲಿ ತಮ್ಮ ಪರಮಾಣು ಸಂಸ್ಥಾಪನೆಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಭಾರತ ಮತ್ತು ಪಾಕಿಸ್ತಾನಗಳಲ್ಲಿರುವ ಪರಮಾಣು ಸಂಸ್ಥಾಪನೆಗಳ ಮೇಲೆ ಎದುರಾಳಿ ದೇಶಗಳು ದಾಳಿ ನಡೆಸುವುದನ್ನು ತಡೆಯುವ ಉದ್ದೇಶದ ಒಪ್ಪಂದದಡಿ ಇದನ್ನು ಮಾಡಲಾಗಿದೆ’’ ಎಂದು ಸಚಿವಾಲಯ ತಿಳಿಸಿದೆ.

ಈ ಒಪ್ಪಂದಕ್ಕೆ 1988 ಡಿಸೆಂಬರ್ 31ರಂದು ಸಹಿ ಹಾಕಲಾಗಿತ್ತು ಹಾಗೂ ಅದು 1991 ಜನವರಿ 27ರಂದು ಜಾರಿಗೆ ಬಂದಿತ್ತು. ಒಪ್ಪಂದದ ವ್ಯಾಪ್ತಿಯಲ್ಲಿ ಬರುವ, ತಮ್ಮಲ್ಲಿರುವ ಪರಮಾಣು ಸ್ಥಾವರಗಳ ಕುರಿತ ಮಾಹಿತಿಯನ್ನು ಭಾರತ ಮತ್ತು ಪಾಕಿಸ್ತಾನಗಳು ಪ್ರತಿ ವರ್ಷ ಜನವರಿ ಒಂದರಂದು ಪರಸ್ಪರರಿಗೆ ನೀಡಬೇಕು ಎಂದು ಒಪ್ಪಂದ ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News