ಇಸ್ರೇಲ್ ದಾಳಿ| ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ
ಹೊಸದಿಲ್ಲಿ: ಭಾರಿ ವೈಮಾನಿಕ ದಾಳಿಗಳೊಂದಿಗೆ ಗಾಝಾ ಪಟ್ಟಿಯ ಮೇಲೆ ಭೂ ದಾಳಿಯನ್ನೂ ವಿಸ್ತರಿಸುವುದಾಗಿ ಇಸ್ರೇಲ್ ಪ್ರಕಟಿಸಿದ್ದು, ಇಲ್ಲಿಯವರೆಗೆ ಇಸ್ರೇಲ್ ಸೇನಾಪಡೆಗಳಿಂದ ಹತರಾಗಿರುವ ಫೆಲೆಸ್ತೀನ್ ನಾಗರಿಕರ ಸಂಖ್ಯೆ 7,000 ಅನ್ನು ದಾಟಿದೆ. ಇಸ್ರೇಲ್-ಹಮಾಸ್ ಸಂಘರ್ಷ ಅಂತ್ಯಗೊಳಿಸಿ ತಕ್ಷಣ ಮಾನವೀಯ ನೆಲೆಯಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ದೂರ ಉಳಿದಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಂಡಿಸಲಾದ ಈ ಗೊತ್ತುವಳಿಗೆ 120 ದೇಶಗಳು ಬೆಂಬಲ ಸೂಚಿಸಿದರೆ, ಇಸ್ರೇಲ್, ಅಮೆರಿಕಾ, ಹಂಗೇರಿ ಹಾಗೂ ಐದು ಪೆಸಿಫಿಕ್ ದ್ವೀಪ ರಾಷ್ಟ್ರಗಳನ್ನು ಒಳಗೊಂಡಂತೆ ಕೇವಲ 14 ದೇಶಗಳು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದವು. ಮತದಾನದಿಂದ ದೂರ ಉಳಿದ 45 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಅವೆಲ್ಲವೂ ಪಾಶ‍್ವಿಮಾತ್ಯ ಸೇನಾ ಮೈತ್ರಿಕೂಟದ ಭಾಗವಾಗಿವೆ. ಅವೆಲ್ಲವೂ ಶುಕ್ರವಾರ ಮಧ್ಯಾಹ್ನ ನ್ಯೂಯಾರ್ಕ್ ನಲ್ಲಿ ನಡೆದ ತುರ್ತು ವಿಶ್ವ ಸಂಸ್ಥೆ ಸಾಮಾನ್ಯ ಅಧಿವೇಶನದ ಮತದಾನದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದವು.
ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಹಾಗೂ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂಬ ಗೊತ್ತುವಳಿಯನ್ನು ಜೋರ್ಡಾನ್ ರಾಷ್ಟ್ರವು ಮಂಡಿಸಿತು. ಅದು ತನ್ನ ಪ್ರಸ್ತಾವನೆಯಲ್ಲಿ ಎಲ್ಲ ಒತ್ತೆಯಾಳು ನಾಗರಿಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಗಾಝಾಗೆ ಯಾವುದೇ ಅಡೆತಡೆಯಿಲ್ಲದಂತೆ ಮಾನವೀಯ ನೆರವನ್ನು ಒದಗಿಸಬೇಕು ಎಂದು ಮನವಿ ಮಾಡಿತು.
ನಿರ್ಣಯದಲ್ಲಿ ಹಮಾಸ್ ಮತ್ತು ಒತ್ತೆಯಾಳು ಎಂಬ ಪದಗಳು ಕಾಣೆಯಾಗಿವೆ ಎಂದು ಹೇಳಿದ್ದ ಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ನಿರ್ಣಯವನ್ನು ವಿರೋಧಿಸಿದ್ದಾರೆ.