ಭಾರತವು ತನ್ನನ್ನು ‘ವಿಶ್ವಮಿತ್ರ’ನಂತೆ ನೋಡುತ್ತಿದೆ: ಪ್ರಧಾನಿ ಮೋದಿ

Update: 2023-11-26 17:45 GMT

ನರೇಂದ್ರ ಮೋದಿ | Photo: PTI

ಹೈದರಾಬಾದ್: ಭಾರತವು ತನ್ನನ್ನು ‘ವಿಶ್ವಮಿತ್ರ’ನಂತೆ ನೋಡುತ್ತಿದೆ ಮತ್ತು ಜಗತ್ತು ದೇಶವನ್ನು ಮಿತ್ರನೆಂದು ಕರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಹೇಳಿದರು.

ಕನ್ಹಾ ಶಾಂತಿ ವನಮ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,‘‘ಹಿಂದೆ ಭಾರತವನ್ನು ಗುಲಾಮನನ್ನಾಗಿಸಿದ್ದವರು ಯೋಗ, ಜ್ಞಾನ ಮತ್ತು ಆಯುರ್ವೇದದಂತಹ ಸಂಪ್ರದಾಯಗಳ ಅದರ ‘ಮೂಲ ಶಕ್ತಿ’ಯ ಮೇಲೆ ದಾಳಿ ನಡೆಸಿದಾಗ ದೇಶವು ಅಪಾರ ನಷ್ಟವನ್ನು ಎದುರಿಸಿತ್ತು. ಆದರೆ ಕಾಲವು ಬದಲಾಗುತ್ತಿದೆ, ಭಾರತವೂ ಬದಲಾಗುತ್ತಿದೆ. ಇದು ಸ್ವಾತಂತ್ರ್ಯದ ‘ಅಮೃತ ಕಾಲ’ವಾಗಿದೆ. ಭಾರತೀಯರು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ನಾವು ಮಾಡುವ ಕೆಲಸವು ಮುಂಬರುವ ಪೀಳಿಗೆಗಳ ಭವಿಷ್ಯವನ್ನು ನಿರ್ಧರಿಸುತ್ತದೆ ’’ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸದೃಢಗೊಳಿಸಲು ಸರಕಾರವು ಎಲ್ಲ ರೀತಿಯಲ್ಲೂ ಶ್ರಮಿಸಿದೆ. ಯೋಗ ಅಥವಾ ಆಯುರ್ವೇದಕ್ಕೆ ಸಂಬಂಧಿಸಿರಲಿ, ಇಂದು ಭಾರತವನ್ನು ಜ್ಞಾನ ಕೇಂದ್ರ ಎಂದು ಹೇಳಲಾಗುತ್ತಿದೆ. ಭಾರತದ ಪ್ರಯತ್ನದಿಂದಾಗಿಯೇ ವಿಶ್ವಸಂಸ್ಥೆಯು ಜೂ.21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ ಎಂದ ಮೋದಿ, ‘‘ಅಭಿವೃದ್ಧಿಗೊಳ್ಳುತ್ತಿರುವ ಭಾರತವು ಇಂದು ‘ವಿಶ್ವಮಿತ್ರ’ನಾಗಿ ಹೊರಹೊಮ್ಮಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತವು ವಿಶ್ವದೊಂದಿಗೆ ನಿಂತಿದ್ದ ರೀತಿಯಿಂದಾಗಿ ನಾನಿಂದು ಭಾರತವು ನಿಮ್ಮ ಸ್ನೇಹಿತ ಎಂದು ಜಗತ್ತಿಗೆ ಹೇಳುವ ಅಗತ್ಯವಿಲ್ಲ, ಭಾರತ ತನ್ನ ಸ್ನೇಹಿತ ಎಂದು ಇಡೀ ಜಗತ್ತೇ ಹೇಳುತ್ತಿದೆ ’’ ಎಂದರು.

ಕೋವಿಡ್ ಸಂದರ್ಭದಲ್ಲಿ ಭಾರತವು ಹಲವಾರು ದೇಶಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಸಿದ್ದನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News