‘ಭಾರತವು ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ’ ; ವಿವಾದ ಸೃಷ್ಟಿಸಿದ ಡಿಎಂಕೆ ನಾಯಕ ಎ.ರಾಜಾ, ಬಂಧನಕ್ಕೆ ಬಿಜೆಪಿ ಆಗ್ರಹ

Update: 2024-03-05 17:14 GMT

 ಎ.ರಾಜಾ | Photo: PTI  

ಚೆನ್ನೈ: ಭಾರತವೆಂದೂ ಒಂದು ರಾಷ್ಟ್ರವಾಗಿರಲಿಲ್ಲ, ಅದು ವೈವಿಧ್ಯಮಯ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಉಪಖಂಡವಾಗಿದೆ ಎಂದು ಹೇಳುವ ಮೂಲಕ ಡಿಎಂಕೆ ನಾಯಕ ಎ.ರಾಜಾ ಅವರು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ನಾವು ಜೈಶ್ರೀರಾಮ,ಜೈಭಾರತ ಮಾತಾ ಎಂದೂ ಹೇಳುವುದಿಲ್ಲ ಎಂದು ಅವರು ಅಬ್ಬರಿಸಿದ್ದಾರೆ. ರಾಜಾ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ,ಇದು ದೇಶ ವಿಭಜನೆಯ ಕರೆಯಾಗಿದೆ ಎಂದು ಆರೋಪಿಸಿದೆ.

ಪಕ್ಷದ ಸಂಘಟನಾ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣವನ್ನು ತೋರಿಸಿರುವ ವೀಡಿಯೊದಲ್ಲಿ ರಾಜಾ,‘ಭಾರತ ಎಂದೂ ಒಂದು ದೇಶವಾಗಿರಲಿಲ್ಲ,ಇದನ್ನು ಚೆನ್ನಾಗಿ ತಿಳಿದುಕೊಳ್ಳಿ. ಒಂದು ದೇಶವು ಒಂದು ಭಾಷೆ,ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿಯನ್ನು ಸೂಚಿಸುತ್ತದೆ ಮತ್ತು ಇಂತಹ ಗುಣಲಕ್ಷಣಗಳು ಮಾತ್ರ ಒಂದು ದೇಶವನ್ನು ಮಾಡುತ್ತವೆ. ಭಾರತವು ಒಂದು ಉಪಖಂಡವಾಗಿದೆ. ಏಕೆಂದರೆ ವಿವಿಧ ರಾಜ್ಯಗಳು ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಹೊಂದಿವೆ. ತಮಿಳುನಾಡು, ಕೇರಳ,ಒಡಿಶಾ ಹೀಗೆ ಎಲ್ಲ ರಾಜ್ಯಗಳು ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿವೆ. ಪ್ರತಿಯೊಂದೂ ಸಂಸ್ಕೃತಿಯನ್ನು ಗೌರವಿಸಬೇಕಿದೆ. ಮಣಿಪುರದಲ್ಲಿ ನಾಯಿ ಮಾಂಸ ಸೇವಿಸುತ್ತಾರೆ. ಸಮುದಾಯವೊಂದು ಗೋಮಾಂಸವನ್ನು ತಿನ್ನುತ್ತಿದ್ದರೆ ಅದನ್ನು ಗೌರವಿಸಿ. ನಿಮ್ಮದೇನು ಸಮಸ್ಯೆ? ಅದನ್ನು ತಿನ್ನುವಂತೆ ಅವರು ನಿಮಗೇನಾದರೂ ಹೇಳುತ್ತಾರಾ? ಹೀಗಾಗಿ ಇದು ವೈವಿಧ್ಯತೆಯಲ್ಲಿ ಏಕತೆಯಾಗಿದೆ. ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ ಮತ್ತು ಅದನ್ನು ಒಪ್ಪಿಕೊಳ್ಳಬೇಕು ’ ಎಂದು ಹೇಳಿದ್ದಾರೆ.

ಡಿಎಂಕೆ ಪಾಳಯದಿಂದ ದ್ವೇಷ ಭಾಷಣಗಳು ಎಗ್ಗಿಲ್ಲದೆ ಮಂದುವರಿದಿವೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಬಿಜೆಪಿ ಮಾಹಿತ ತಂತ್ರಜ್ಞಾನ ಘಟಕದ ಉಸ್ತುವಾರಿ ಅಮಿತ್ ಮಾಳವೀಯ ಅವರು, ಉದಯನಿಧಿ ಸ್ಟ್ಯಾಲಿನ್ ಸನಾತನ ಧರ್ಮದ ನಿರ್ಮೂಲನಕ್ಕೆ ಕರೆ ನೀಡಿದ ಬಳಿಕ ಈಗ ಎ.ರಾಜಾ ಭಾರತದ ವಿಭಜನೆಗೆ ಕರೆ ನೀಡಿದ್ದಾರೆ. ಭಗವಾನ ಶ್ರೀರಾಮನನ್ನು ಧಿಕ್ಕರಿಸಿದ್ದಾರೆ. ಮಣಿಪುರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಒಂದು ದೇಶವಾಗಿ ಭಾರತದ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್,ಅದರ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ಪಾಲುದಾರರು ಮೌನವಾಗಿದ್ದಾರೆ ಎಂದು ಹೇಳಿದ್ದಾರೆ.

ರಾಜಾರನ್ನು ಬಂಧಿಸುವಂತೆ ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಆಗ್ರಹಿಸಿದ್ದಾರೆ.

ಅತ್ತ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜಾ ಹೇಳಿಕೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ ಅವರು,‘ಅವರ ಹೇಳಿಕೆಗಳಿಗೆ ನಾನು ಶೇ.100ರಷ್ಟು ವಿರುದ್ಧವಾಗಿದ್ದೇನೆ, ಈ ವೇದಿಕೆಯಿಂದ ಅವರ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ಶ್ರೀರಾಮ ಎಲ್ಲರಿಗೂ ಸೇರಿದವನು ಮತ್ತು ಎಲ್ಲರನ್ನೂ ಒಳಗೊಂಡಿದ್ದಾನೆ ಎಂದು ನಾನು ನಂಬಿದ್ದೇನೆ. ಇಮಾಮ್-ಎ-ಹಿಂದ್ ಎಂದು ಕರೆಯಲ್ಪಟ್ಟಿದ್ದ ಶ್ರೀರಾಮ ಎಲ್ಲ ಸಮುದಾಯಗಳು, ಧರ್ಮಗಳು ಮತ್ತು ಜಾತಿಗಳಿಗೆ ಮೀರಿದವನು ಎಂದು ನಾನು ಭಾವಿಸಿದ್ದೇನೆ ’ಎಂದು ಉತ್ತರಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News