ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯರು

Update: 2025-02-07 20:35 IST
JAIL

ಸಾಂದರ್ಭಿಕ ಚಿತ್ರ

  • whatsapp icon

ಹೊಸದಿಲ್ಲಿ: ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸಕ್ತ 10,152 ಮಂದಿ ಭಾರತೀಯರು ವಿದೇಶದ ಜೈಲುಗಳಲ್ಲಿ ಬಂಧಿಗಳಾಗಿದ್ದಾರೆಂದು ಕೇಂದ್ರ ಸರಕಾರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಇಂತಹ ಕೈದಿಗಳ ದೇಶವಾರು ದತ್ತಾಂಶಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಲಿಖಿತ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಉತ್ತರಿಸುತ್ತಿದ್ದ ಸಂದರ್ಭ ಈ ವಿಷಯವನ್ನು ತಿಳಿಸಿದರು.

ಪ್ರಸಕ್ತ ಸೌದಿ ಆರೇಬಿಯ, ಕುವೈತ್, ಯುಎಇ, ಖತರ್, ನೇಪಾಳ, ಪಾಕಿಸ್ತಾನ, ಅಮೆರಿಕ, ಶ್ರೀಲಂಕಾ, ಸ್ಪೇನ್, ರಶ್ಯ, ಇಸ್ರೇಲ್, ಚೀನಾ , ಬಾಂಗ್ಲಾದೇಶ ಹಾಗೂ ಅರ್ಜೆಂಟೀನಾ ಸೇರಿತಂತೆ 86 ದೇಶಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಅಥವಾ ದೋಷಿಗಳಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ.

ಸೌದಿ ಆರೇಬಿಯದ ಜೈಲುಗಳಲ್ಲಿ 2633 ಮಂದಿ ಹಾಗೂ ಯುಎಇನ ಜೈಲುಗಳಲ್ಲಿ 2518 ಭಾರತೀಯ ಕೈದಿಗಳಿದ್ದಾರೆಂದು ಸಚಿವರು ದತ್ತಾಂಶಗಳನ್ನು ಸದನದಲ್ಲಿ ಪ್ರಕಟಿಸುತ್ತಾ ತಿಳಿಸಿದರು.

ನೇಪಾಳದಲ್ಲಿ 1317 ಹಾಗೂ ಪಾಕಿಸ್ತಾನದಲ್ಲಿ 266 ಹಾಗೂ ಶ್ರೀಲಂಕಾದಲ್ಲಿ 98 ಮಂದಿ ಭಾರತೀಯ ಕೈದಿಗಳಿದ್ದಾರೆಂದು ದತ್ತಾಂಶಗಳು ತಿಳಿಸಿವೆ.

ಸಚಿವಾಲಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ವಿಚಾರಣಾಧೀನ ಕೈದಿಗಳು ಸೇರಿದಂತೆ ವಿದೇಶದ ಕಾರಾಗೃಹಗಳಲ್ಲಿರುವ ಭಾರತೀಯ ಕೈದಿಗಳ ಸಂಖ್ಯೆ 10,152 ಆಗಿದೆ ಎಂದು ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದರು.

ಫಿಫಾ ವಿಶ್ವಕಪ್ ಬಳಿಕ ದೊಡ್ಡ ಸಂಖ್ಯೆಯ ಭಾರತೀಯರು ಅದರಲ್ಲೂ ವಿಶೇಷವಾಗಿ ಕೇರಳಿಯರನ್ನು ಖತರ್‌ ನ ಜೈಲುಗಳಲ್ಲಿರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದೇಶಾಂಗ ಸಚಿವಾಲಯಕ್ಕೆ ದೊರೆತಿರುವ ಮಾಹಿತಿ ಪ್ರಕಾರ ವಿಚಾರಣಾಧೀನ ಕೈದಿಗಳು ಸೇರಿದಂತೆ 611 ಮಂದಿ ಭಾರತೀಯ ಕೈದಿಗಳು ಖತರ್‌ ನ ಜೈಲುಗಳಲ್ಲಿದ್ದಾರೆಂದು ತಿಳಿಸಿದರು. ಆದರೆ ಬಲವಾದ ಖಾಸಗಿ ಕಾನೂನುಗಳಿಗೆ ಅನುಸಾರವಾಗಿ ಖತರ್ ಸರಕಾರವು ಕೈದಿಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ. ಆದುದರಿಂದ ಆ ದೇಶದಲ್ಲಿರುವ ಭಾರತೀಯ ಕೈದಿಗಳ ದತ್ತಾಂಶಗಳು ಲಭ್ಯವಿಲ್ಲವೆಂದು ತಿಳಿಸಿದರು.

ಆದಾಗ್ಯೂ, ಫಿಫಾ ವಿಶ್ವಕಪ್ ಬಳಿಕ ಖತರ್‌ ನ ಜೈಲುಗಳಲ್ಲಿ ಭಾರತೀಯ ಕೈದಿಗಳ ಸಂಖ್ಯೆಯಲ್ಲಿ ಯಾವುದೇ ಅಸಹಜವಾದ ಏರಿಕೆಯಾಗಿಲ್ಲವೆಂದು ಸಿಂಗ್ ಸ್ಪಷ್ಟಪಡಿಸಿದರು

ವಿದೇಶಿ ಜೈಲುಗಳಲ್ಲಿರುವವರು ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯ ಸುರಕ್ಷತೆ , ಭದ್ರತೆ ಮತ್ತು ಕ್ಷೇಮದ ಬಗ್ಗೆ ಕೇಂದ್ರ ಸರಕಾರವು ಉನ್ನತ ಮಟ್ಟದ ಆದ್ಯತೆಯನ್ನು ನೀಡುತ್ತಿದೆಯೆಂದು ತಿಳಿಸಿದರು.


ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News