“ಅಮಾಯಕರನ್ನು ಕೊಲ್ಲಲಾಗುತ್ತಿದೆ”: ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕರೆ
ಹೊಸದಿಲ್ಲಿ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿಯುವ ಮೂಲಕ ಇಸ್ರೇಲ್‌ನ್ನು ಬೆಂಬಲಿಸಿದ ಭಾರತದ ನಿರ್ಧಾರದ ಕುರಿತು ಕೇರಳ ಮುಖ್ಯಮಂತ್ರಿ ಹಾಗೂ ಸಿಪಿಎಂ ನಾಯಕ ಪಿಣರಾಯಿ ವಿಜಯನ್ ಅವರು ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಸಿಪಿಎಂ ಫೆಲೆಸ್ತೀನಿಗಳೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ರವಿವಾರ ದಿಲ್ಲಿಯ ಕೇಂದ್ರಕಚೇರಿಯಲ್ಲಿ ಆಯೋಜಿಸಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಅವರು, ಫೆಲೆಸ್ತೀನಿ ಜನರ ಹತ್ಯಾಕಾಂಡವನ್ನು ಖಂಡಿಸದೆ ಭಾರತವು ಅದರಲ್ಲಿ ಭಾಗಿಯಾಗುತ್ತಿದೆ ಎಂದು ಹೇಳಿದರು.
‘ನಾವಿಂದು ಫೆಲೆಸ್ತೀನಿ ಜನರ ಕ್ರೂರ ಹತ್ಯಾಕಾಂಡವನ್ನು ನೋಡುತ್ತಿದ್ದೇವೆ. ಅಮಾಯಕರನ್ನು ಕೊಲ್ಲಲಾಗುತ್ತಿದೆ. ಈ ನರಮೇಧವನ್ನು ನಾವು ಖಂಡಿಸದಿದ್ದರೆ ನಾವೂ ಅದರಲ್ಲಿ ಭಾಗಿಯಾಗುತ್ತೇವೆ ’ ಎಂದು ಹೇಳಿದ ಅವರು,ಫೆಲೆಸ್ತೀನ್ ಹೋರಾಟಕ್ಕೆ ಭಾರತದ ಬೆಂಬಲವು ರಾಷ್ಟ್ರೀಯ ಒಮ್ಮತವಾಗಿ ಮೂಡಿಬಂದಿದೆ ಮತ್ತು ದೇಶವು ಮತದಾನದಿಂದ ದೂರವಿದ್ದುದು ಈ ಒಮ್ಮತವನ್ನು ಉಲ್ಲಂಘಿಸಿದೆ. ಇದು ದೇಶದ ನಿಲುವಿನಿಂದ ಸಂಪೂರ್ಣ ವಿಮುಖತೆಯಾಗಿದೆ ಎಂದರು. ತಕ್ಷಣ ಕದನ ವಿರಾಮಕ್ಕೆ ಪಿಣರಾಯಿ ಕರೆಯನ್ನು ನೀಡಿದರು.