ಇಂಟರ್ನ್‌ಶಿಪ್ ಯೋಜನೆ: 80,000ಕ್ಕೂ ಅಧಿಕ ಅವಕಾಶಗಳಿಗೆ ಅಭ್ಯರ್ಥಿಗಳ ನೋಂದಣಿ ಆರಂಭ

Update: 2024-10-13 13:33 GMT

File Photo - indianexpress

ಹೊಸದಿಲ್ಲಿ: ಸರಕಾರವು ಪಿಎಂ ಇಂಟರ್ನ್‌ಶಿಪ್ ಯೋಜನೆಯ ನೋಂದಣಿ ಗವಾಕ್ಷಿಯನ್ನು ಶನಿವಾರದಿಂದ ಆರಂಭಿಸಿದ್ದು,21ರಿಂದ 24 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಯೋಜನೆಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಯೋಜನೆಯಡಿ 737 ಜಿಲ್ಲೆಗಳಲ್ಲಿ ಮತ್ತು 24 ಕ್ಷೇತ್ರಗಳಲ್ಲಿ 80,000ಕ್ಕೂ ಅಧಿಕ ಇಂಟರ್ನ್‌ಶಿಪ್ ಅವಕಾಶಗಳನ್ನು ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾಗಿದ್ದು,ಶೇ.56ಕ್ಕೂ ಅಧಿಕ ಅವಕಾಶಗಳು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿವೆ.

ಐದು ವರ್ಷಗಳಲ್ಲಿ ಉನ್ನತ 500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಯೋಜನೆಯು ಹೊಂದಿದೆ. ಇದಕ್ಕೂ ಮುನ್ನ ಕಂಪನಿಗಳು ತಮ್ಮ ಇಂಟರ್ನ್‌ಶಿಪ್ ಅವಕಾಶಗಳನ್ನು ನೋಂದಾಯಿಸಲು ಅ.3ರಿಂದ ಪೋರ್ಟಲ್‌ನ್ನು ಮುಕ್ತಗೊಳಿಸಲಾಗಿತ್ತು.

ಕಳೆದೊಂದು ವಾರದಲ್ಲಿ ಇಂಧನ,ಪ್ರವಾಸ ಮತ್ತು ಆದರಾತಿಥ್ಯ,ವಾಹನಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಸೇರಿದಂತೆ 24 ಕ್ಷೇತ್ರಗಳಲ್ಲಿ 80,000 ಕ್ಕೂ ಅಧಿಕ ಇಂಟರ್ನ್‌ಶಿಪ್ ಅವಕಾಶಗಳು ಪೋರ್ಟಲ್‌ಗೆ ಸೇರ್ಪಡೆಗೊಂಡಿವೆ ಎಂದು ಯೋಜನೆಯ ಅನುಷ್ಠಾನ ಏಜೆನ್ಸಿಯಾಗಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಟ್ವೀಟಿಸಿದೆ.

ಇಂಧನ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ 25,000ಕ್ಕೂ ಅಧಿಕ ಇಂಟರ್ನ್‌ಶಿಪ್ ಅವಕಾಶಗಳಿದ್ದು,ನಂತರದ ಸ್ಥಾನಗಳಲ್ಲಿ ತಯಾರಿಕೆ ಮತ್ತು ವಾಹನ ಕ್ಷೇತ್ರಗಳು(16,000ಕ್ಕೂ ಅಧಿಕ),ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು(10,000ಕ್ಕೂ ಅಧಿಕ) ಕ್ಷೇತ್ರಗಳಿವೆ. ಅತ್ಯಂತ ಹೆಚ್ಚಿನ 10,242 ಅವಕಾಶಗಳು ಮಹಾರಾಷ್ಟ್ರದಲ್ಲಿದ್ದು,ನಂತರದ ಸ್ಥಾನಗಳಲ್ಲಿ ತಮಿಳುನಾಡು(9,827),ಗುಜರಾತ್(9,311),ಕರ್ನಾಟಕ (8,326) ಮತ್ತು ಉತ್ತರ ಪ್ರದೇಶ(7,156)ಗಳಿವೆ.

ಇಂಟರ್ನ್‌ಶಿಪ್ ಯೋಜನೆಯು ಅಭ್ಯರ್ಥಿಗಳು ಉನ್ನತ 500 ಕಂಪನಿಗಳಲ್ಲಿ ಅನುಭವವನ್ನು ಗಳಿಸಲು 12 ತಿಂಗಳುಗಳ ಅವಕಾಶವನ್ನು ನೀಡುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಮಹೀಂದ್ರ ಆ್ಯಂಡ್ ಮಹೀಂದ್ರ,ಅಲೆಂಬಿಕ್ ಫಾರ್ಮಾ,ಮ್ಯಾಕ್ಸ್ ಲೈಫ್ ಇನ್ಶೂರನ್ಸ್ ಇವು ಪೋರ್ಟಲ್‌ನಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಿರುವ ಆರಂಭಿಕ ಕಂಪನಿಗಳಲ್ಲಿ ಸೇರಿದ್ದವು ಈಗ ಪಟ್ಟಿಯು ಜ್ಯುಬಿಲಂಟ್ ಫುಡ್‌ವರ್ಕ್ಸ್,ಈಚರ್ ಮೋಟರ್ಸ್,ಲಾರ್ಸೆನ್ ಆ್ಯಂಡ್ ಟುಬ್ರೊ,ಬಜಾಜ್ ಫೈನಾನ್ಸ್ ಮತ್ತು ಮುತ್ತೂಟ್ ಫೈನಾನ್ಸ್‌ನಂತಹ ಕಂಪನಿಗಳನ್ನು ಒಳಗೊಂಡಿದೆ.

ಶಾರ್ಟ್‌ಲಿಸ್ಟ್ ಮಾಡಲಾದ ಅರ್ಜಿಗಳನ್ನು ಅ.27ರಿಂದ ನ.7ರವರೆಗೆ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗುವುದು. ಅಭ್ಯರ್ಥಿಗಳು ಆಫರ್‌ಗಳನ್ನು ಸ್ವೀಕರಿಸಲು ನ.8ರಿಂದ ನ.15ರವರೆಗೆ ಸಮಯಾವಕಾಶವನ್ನು ಹೊಂದಿರುತ್ತಾರೆ. ಅಭ್ಯರ್ಥಿಯು ಆರಂಭಿಕ ಆಫರ್‌ನ್ನು ಸ್ವೀಕರಿಸದಿದ್ದರೆ ಇನ್ನೂ ಎರಡು ಆಫರ್‌ಗಳನ್ನು ನೀಡಲಾಗುತ್ತದೆ.

ಯೋಜನೆಯ ಆರಂಭಿಕ ಹಂತದಲ್ಲಿ 800 ಕೋಟಿ ರೂ.ಗಳ ವೆಚ್ಚದಲ್ಲಿ 1.25 ಲಕ್ಷ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್ ಆರಂಭದ ವೇಳೆಗೆ ಸುಮಾರು ಒಂದು ಲಕ್ಷ ಅಭ್ಯರ್ಥಿಗಳನ್ನು ಯೋಜನೆಯಲ್ಲಿ ಸೇರಿಸುವ ನಿರೀಕ್ಷೆಯಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸರಕಾರವು ನೇರ ನಗದು ವರ್ಗಾವಣೆಯ ಮೂಲಕ ಮಾಸಿಕ 4,500 ರೂ.ಗಳ ಸ್ಟೈಫಂಡ್ ನೀಡಲಿದೆ. ಹೆಚ್ಚುವರಿಯಾಗಿ ಮಾಸಿಕ 500 ರೂ.ಗಳನ್ನು ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನೀಡಲಾಗುವುದು. ಸರಕಾರವು ವರ್ಷಕ್ಕೆ ಒಮ್ಮೆ 6,000 ರೂ.ಗಳ ಅನುದಾನವನ್ನೂ ನೀಡಲಿದೆ.

ಹೈಸ್ಕೂಲ್,ಹೈಯರ್ ಸೆಕೆಂಡರಿ ಸ್ಕೂಲ್‌ಗಳಿಂದ ತೇರ್ಗಡೆಗೊಂಡವರು,ಐಟಿಐ ಪ್ರಮಾಣಪತ್ರ ಹೊಂದಿರುವವರು,ಪಾಲಿಟೆಕ್ನಿಕ್ ಸಂಸ್ಥೆಗಳಿಂದ ಡಿಪ್ಲೋಮಾ ಪಡೆದವರು,ಬಿಎ,ಬಿಎಸ್ಸಿ,ಬಿಕಾಮ್,ಬಿಬಿಎ,ಬಿ ಫಾರ್ಮಾದಂತಹ ಪದವಿಗಳನ್ನು ಪಡೆದವರು ಯಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್‌ಸಿ/ಎಸ್‌ಟಿಗಳು,ಒಬಿಸಿಗಳು ಮತ್ತು ವಿಕಲಾಂಗರಿಗೆ ಮೀಸಲಾತಿಯು ಸರಕಾರಿ ಹುದ್ದೆಗಳಲ್ಲಿ ಇರುವಂತೆಯೇ ಇರುತ್ತದೆ.

ಕುಟುಂಬದ ಯಾವುದೇ ಸದಸ್ಯನ ಆದಾಯ 2023-24ನೇ ವಿತ್ತವರ್ಷದಲ್ಲಿ ಎಂಟು ಲಕ್ಷ ರೂ.ಗೂ ಅಧಿಕವಿದ್ದರೆ ಅಥವಾ ಕುಟುಂಬದಲ್ಲಿ ಸರಕಾರಿ ನೌಕರರಿದ್ದರೆ ಅಂತಹ ಅಭ್ಯರ್ಥಿಗಳು ಯೋಜನೆಯಡಿ ಅರ್ಜಿಸಲ್ಲಿಸಲು ಅರ್ಹರಲ್ಲ. ಐಐಟಿಗಳು,ಐಐಎಂಗಳು,ನ್ಯಾಷಬನಲ್ ಲಾ ಯುನಿವರ್ಸಿಟಿ, ಐಐಎಸ್‌ಇಆರ್,ಎನ್‌ಐಡಿ ಮತ್ತು ಐಐಟಿಗಳ ಪದವೀಧರರು,ಸಿಎ,ಸಿಎಂಎ, ಸಿಎಸ್,ಎಂಬಿಬಿಎಸ್,ಬಿಡಿಎಸ್,ಎಂಬಿಎ ಹಾಗೂ ಯಾವುದೇ ಸ್ನಾತಕೋತ್ತರ ಪದವಿಗಳನ್ನು ಹೊಂದಿರುವವರೂ ಈ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News