ಬೆಂಗಳೂರಿನ ಕೆರೆಗಳ ಒತ್ತುವರಿ : ಅಧಿಕಾರಿಗಳಿಗೆ ಎನ್‌ಜಿಟಿ ನೋಟಿಸ್
ಹೊಸದಿಲ್ಲಿ : ಬೆಂಗಳೂರಿನ ಎರಡು ಕೆರೆಗಳ ಒತ್ತುವರಿ ಹಾಗೂ ಅವುಗಳಿಗೆ ನೀರು ಹರಿದುಬರುವ ರಾಜಕಾಲುವೆಯನ್ನು ಮುಚ್ಚಿರುವ ಕುರಿತಾದ ಲೋಕಾಯುಕ್ತ ವರದಿಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ)ವು ಬೆಂಗಳೂರು ಮಹಾನಗರಪಾಲಿಕೆ(ಬಿಬಿಎಂಪಿ)ಯ ಮುಖ್ಯ ಆಯುಕ್ತ ಹಾಗೂ ಇತರ ಅಧಿಕಾರಿಗಳಿಂದ ಪ್ರತಿಕ್ರಿಯೆಯನ್ನು ಕೋರಿದೆ.
ಬೆಂಗಳೂರಿನ ವಿಭೂತಿಪುರ ಹಾಗೂ ದೊಡ್ಡನೆಕುಂದಿ ಕೆರೆಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಲೋಕಾಯುಕ್ತ ನಡೆಸಿದ ತನಿಖೆಯ ಬಗ್ಗೆ ಸುದ್ದಿಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಎನ್ಜಿಟಿಯು ದೂರನ್ನಾಗಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ವಿಭೂತಿಪುರ ಕೆರೆಯ ಪ್ರವೇಶದ್ವಾರ ವಿರೂಪಗೊಂಡಿರುವುದು, ಬೇಲಿಯನ್ನು ನಾಶಪಡಿಸಿರುವುದು ಹಾಗೂ ಆವರಣದೊಳಗೆ ಅಕ್ರಮ ನಿರ್ಮಾಣಗಳು ತಲೆಯೆತ್ತಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆಹಚ್ಚಿದ್ದಾರೆಂದು ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್ ಅವರನ್ನೊಳಗೊಂಡ ನ್ಯಾಯಪೀಠವು ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ವಿಭೂತಿಪುರ ಕೆರೆಯಲ್ಲಿ ನೀರಿನ ಮಟ್ಟವು ಮಳೆಗಾಲದಲ್ಲಿ ಕೂಡಾ ಆತಂಕಕಾರಿ ಎಂಬಷ್ಟು ಕಡಿಮೆ ಮಟ್ಟದಲ್ಲಿದೆ. ನೀರಿನ ಹೊರಹರಿವಿನ ಮಾರ್ಗವನ್ನು ನಿರ್ಬಂಧಿಸಲಾಗಿದೆ. ದೊಡ್ಡನೆಕುಂದಿ ಕೆರೆ ಕೂಡಾ ಇಂತಹದೇ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದವರು ನ್ಯಾ. ಪ್ರಕಾಶ್ ಶ್ರೀವಾಸ್ತವ ತಿಳಿಸಿದ್ದಾರೆ.
‘‘ ಜಲ ( ಮಾಲಿನ್ಯ ತಡೆ ಹಾಗೂ ನಿಯಂತ್ರಣ)ಕಾಯ್ದೆ ಹಾಗೂ ಪರಿಸರ ( ಸಂರಕ್ಷಣೆ) ಕಾಯ್ದೆಯ ನಿಯಮಗಳ ಅನುಸುರಣೆಗೆ ಸಂಬಂಧಿಸಿದ ಮಹತ್ವದ ನಿಯಮಗಳ ಉಲ್ಲಂಘನೆಯಾಗಿರುವ ಬಗ್ಗೆಯೂ ವರದಿ ಗಮನಸೆಳೆದಿತ್ತು ’’ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಹಾಗೂ ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರನ್ನೊಳಗೊಂಡ ಹಸಿರುಪೀಠ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ, ಬೆಂಗಳೂರು ಜಲಪೂರೈಕೆ ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರನ್ನು ಪ್ರತಿವಾದಿಗಳು ಹಾಗೂ ಕಕ್ಷಿದಾರರೆಂದು ಹಸಿರು ನ್ಯಾಯಾಧೀಕರಣವು ಸೂಚಿಸಿತು.
ಬೆಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವಕೀಲರು ನೋಟಿಸನ್ನು ಸ್ವೀರಿಸಿದ್ದು, ಉತ್ತರಿಸಲು ಸಮಯಾವಕಾಶವನ್ನು ಕೋರಿದೆಯೆಂದು ನ್ಯಾಯಾಧೀಕರಣವು ತಿಳಿಸಿದೆ.