ಲಡಾಖ್ ಭವನ್ ಎದುರು ಪ್ರತಿಭಟಿಸುತ್ತಿದ್ದ ಸೋನಂ ವಾಂಗ್ಚುಕ್ ರನ್ನು ವಶಕ್ಕೆ ಪಡೆದ ಪೊಲೀಸರು
ಹೊಸದಿಲ್ಲಿ: ರವಿವಾರ ಲಡಾಖ್ ಭವನದೆದುರು ಪ್ರತಿಭಟಿಸುತ್ತಿದ್ದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಇತರ 20 ಮಂದಿಯನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಂಗ್ಚುಕ್ ರೊಂದಿಗೆ ಉಪವಾಸ ನಡೆಸುತ್ತಿದ್ದ 20ರಿಂದ 25 ಮಂದಿ ಪ್ರತಿಭಟನಾಕಾರರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಾವು ಪ್ರತಿಭಟಿಸುತ್ತಿರಲಿಲ್ಲ, ಬದಲಿಗೆ ಶಾಂತಿಯುತವಾಗಿ ಕುಳಿತಿದ್ದೆವು ಎಂದು ಕೆಲವು ಪ್ರತಿಭಟನಾಕಾರರು ಆಕ್ಷೇಪಿಸಿದ್ದಾರೆ.
ಲಡಾಖ್ ಭವನದೆದುರು ಕುಳಿತುಕೊಳ್ಳಲು ಪ್ರತಿಭಟನಾಕಾರರಿಗೆ ಯಾವುದೇ ಅನುಮತಿ ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅವರು ಜಂತರ್ ಮಂತರ್ ಎಂದು ಪ್ರತಿಭಟನೆ ನಡೆಸಲು ಅರ್ಜಿಯೊಂದನ್ನು ಸಲ್ಲಿಸಿದ್ದರು. ಅವರ ಅರ್ಜಿಯು ಪರಿಗಣನೆಯಲ್ಲಿದೆ. ಅವರಿಗೆ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿರಲಿಲ್ಲ. ನಾವು ಕೆಲವರನ್ನು ವಶಕ್ಕೆ ಪಡೆದಿದ್ದು, ಅವರನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.
ಲಡಾಖ್ ಅನ್ನು ಸಂವಿಧಾನದ ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಲೇಹ್ ನಿಂದ ದಿಲ್ಲಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.