ವಕ್ಫ್ ಮಸೂದೆಯ ಮೂಲಕ ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹುನ್ನಾರವನ್ನು ಬಯಲು ಮಾಡಬೇಕಾದ ಅಗತ್ಯವಿದೆ : ಜಮಾಅತ್ ಉಲೇಮ ಇ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಶದ್ ಮದನಿ
ಹೊಸದಿಲ್ಲಿ : ವಕ್ಫ್ ಮಸೂದೆಯ ಮೂಲಕ ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹುನ್ನಾರವನ್ನು ಬಯಲು ಮಾಡಬೇಕಾದ ಅಗತ್ಯವಿದೆ ಎಂದು ಜಮಾಅತ್ ಉಲೇಮ ಇ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಶದ್ ಮದನಿ ಹೇಳಿದ್ದಾರೆ.
ಇಂತಹ ಬೆದರಿಕೆಗಳ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಆಳವಾದ ಚರ್ಚೆ ನಡೆಸಲು ಮುಂದಿನ ತಿಂಗಳು ವಿಚಾರಗೋಷ್ಠಿಯೊಂದನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮದನಿ, 1923ರಿಂದ 2013ರವರೆಗಿನ ವಕ್ಫ್ ಆಸ್ತಿಯನ್ನು ಸಂರಕ್ಷಿಸುವುದನ್ನು ಖಾತರಿಪಡಿಸಲು ಜಮಾಅತ್ ಪರಿಣಾಮಕಾರಿ ಕ್ರಮ ಕೈಗೊಂಡಿದೆ ಹಾಗೂ ನಾವು ಆ ಬದ್ಧತೆಯೊಂದಿಗೆ ಮುಂದುವರಿದಿದ್ದೇವೆ ಎಂದು ಹೇಳಿದ್ದಾರೆ.
ಮಾನವೀಯತೆ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಸಂವಿಧಾನ ರಕ್ಷಣೆ ಆಧಾರದಲ್ಲಿ ಸಮಾನತೆ ಹಾಗೂ ಸೌಹಾರ್ದತೆಯನ್ನು ಉತ್ತೇಜಿಸುವ ಸ್ಫೂರ್ತಿಯೊಂದಿಗೆ ನವೆಂಬರ್ 3, 2024ರಂದು ಜಮಾಅತ್ ಉಲೇಮ ಇ-ಹಿಂದ್ ನ ಅದ್ದೂರಿ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮನ್ನು ಮೌಲ್ಯಯುತ ಪರಂಪರೆಯಿಂದ ವಂಚಿಸುವ ವಕ್ಫ್ (ತಿದ್ದುಪಡಿ) ಮಸೂದೆಯ ಮುಸುಕು ಹೊದ್ದು, ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪಿತೂರಿಯನ್ನು ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.
ಕೋಮುವಾದಿ ಮನಸುಗಳು ನಿರ್ದಿಷ್ಟ ಸಮುದಾಯವೊಂದನ್ನು ಅಂಚಿಗೆ ದೂಡುವ ಯೋಜಿತ ಪಿತೂರಿ ಹಾಗೂ ವಿಫಲ ಪ್ರಯತ್ನವನ್ನು ನಡೆಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.