ಅಗ್ನಿಪಥ್ ಯೋಜನೆಯ ಬಗ್ಗೆ ಮತ್ತೆ ಪ್ರಶ್ನೆಯೆತ್ತಿದ ರಾಹುಲ್ ಗಾಂಧಿ

Update: 2024-10-13 13:43 GMT

Photo Credit: PTI

ಹೊಸದಿಲ್ಲಿ : ನಾಶಿಕ್ ನಲ್ಲಿ ನಡೆದ ತರಬೇತಿಯಲ್ಲಿ ಇಬ್ಬರು ಅಗ್ನಿವೀರ್ ಯೋಧರು ಮೃತಪಟ್ಟ ನಂತರ, ಯಾಕೆ ಓರ್ವ ಯೋಧನ ಜೀವ ಮತ್ತೊಬ್ಬ ಯೋಧನ ಜೀವಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಉತ್ತರಿಸಬೇಕು ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಹುತಾತ್ಮ ಯೋಧರು ಪಡೆಯುವಂಥದೇ ಪಿಂಚಣಿ ಹಾಗೂ ಸೌಲಭ್ಯಗಳನ್ನು ಅಗ್ನಿವೀರ್ ಯೋಧರಾಗಿ ಮೃತಪಟ್ಟಿರುವ ಯೋಧರ ಕುಟುಂಬಗಳು ಏಕೆ ಪಡೆಯುವುದಿಲ್ಲ ಎಂದು ಪ್ರಶ್ನಿಸಿರುವ ಅವರು, ನಾನು ಈ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ನಾಶಿಕ್ ನಲ್ಲಿ ತರಬೇತಿಯಲ್ಲಿ ಗೋಹಿಲ್ ವಿಶ್ವರಾಜ್ ಸಿಂಗ್ ಹಾಗೂ ಸೈಫತ್ ಶೀತ್ ರ ಸಾವು ತುಂಬಾ ದುರಂತಮಯವಾಗಿದೆ. ಅವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು” ಎಂದು ಹೇಳಿದ್ದಾರೆ.

“ಈ ಘಟನೆಯು ಬಿಜೆಪಿ ಸರಕಾರ ಉತ್ತರಿಸಲಾಗದ ಅಗ್ನಿವೀರ್ ಯೋಜನೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನೆತ್ತಿದೆ. ಯಾವುದೇ ಇತರ ಹುತಾತ್ಮ ಯೋಧರು ಪಡೆಯುವಷ್ಟೆ ಪರಿಹಾರವನ್ನು ಗೋಹಿಲ್ ಹಾಗೂ ಸೈಫತ್ ಕುಟುಂಬಗಳು ಪಡೆಯಲಿವೆಯೆ?” ಎಂದು ಪ್ರಶ್ನಿಸಿದ್ದಾರೆ.

“ಅಗ್ನಿವೀರ್ ಯೋಧರ ಕುಟುಂಬಗಳೇಕೆ ಪಿಂಚಣಿ ಹಾಗೂ ಸರಕಾರಿ ಸೌಲಭ್ಯಗಳನ್ನು ಪಡೆಯುವುದಿಲ್ಲ? ಹೊಣೆಗಾರಿಕೆ ಹಾಗೂ ತ್ಯಾಗಗಳು ಇಬ್ಬರೂ ಯೋಧರಿಗೆ ಒಂದೇ ಆಗಿರುವಾಗ, ಅವರು ಹುತಾತ್ಮಗೊಂಡ ನಂತರ ಈ ತಾರತಮ್ಯವೇಕೆ?” ಎಂದೂ ಅವರು ಪ್ರಶ್ನಿಸಿದ್ದಾರೆ.

ಅಗ್ನಿಪಥ್ ಯೋಜನೆಯು ಸೇನೆಗೂ ಅನ್ಯಾಯ, ಹುತಾತ್ಮರಾದ ಧೀರ ಯೋಧರಿಗೂ ಅನ್ಯಾಯ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

“ಒಬ್ಬ ಯೋಧನ ಜೀವದ ಮೌಲ್ಯ ಮತ್ತೊಬ್ಬ ಯೋಧನ ಜೀವದ ಮೌಲ್ಯಕ್ಕಿಂತ ಹೇಗೆ ಹೆಚ್ಚು ಎಂಬುದರ ಕುರಿತು ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರು ಉತ್ತರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

“ನಾವು ಈ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ನಿಲ್ಲೋಣ. ಬಿಜೆಪಿ ಸರಕಾರದ ‘ಅಗ್ನಿವೀರ್’ ಯೋಜನೆಯನ್ನು ತೆಗೆದು ಹಾಕಲು ಇಂದೇ ನಮ್ಮ ‘ಜೈ ಜವಾನ್’ ಚಳವಳಿಯೊಂದಿಗೆ ಸೇರ್ಪಡೆಯಾಗಿ ಹಾಗೂ ದೇಶದ ಯುವಜನತೆ ಹಾಗೂ ಸೇನೆಯ ಭವಿಷ್ಯವನ್ನು ರಕ್ಷಿಸಿ” ಎಂದು ಅವರು ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಫೈರಿಂಗ್ ತರಬೇತಿಯ ಸಂದರ್ಭದಲ್ಲಿ ಅಗ್ನಿವೀರರಾದ ಗೋಹಿಲ್ ಹಾಗೂ ಸೈಫತ್ ಮೃತಪಟ್ಟಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News