ಮಹಾರಾಷ್ಟ್ರ | ಬಾಬಾ ಸಿದ್ದೀಕ್ ಹತ್ಯೆ ಪ್ರಕರಣ : ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ರಾಜೀನಾಮೆಗೆ ಪ್ರತಿಪಕ್ಷ ಆಗ್ರಹ
ಮುಂಬೈ : ಎನ್ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದೀಕ್ ಅವರ ಹತ್ಯೆ ರಾಜ್ಯಕ್ಕೆ ಆಘಾತಕಾರಿ ಹಾಗೂ ಅವಮಾನಕರ ಎಂದು ಮಹಾರಾಷ್ಟ್ರದ ಪ್ರತಿಪಕ್ಷಗಳು ರವಿವಾರ ಹೇಳಿವೆ.
ಬಾಬಾ ಸಿದ್ದೀಕ್ ಅವರ ಹತ್ಯೆಯ ಕುರಿತಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಪಡ್ನಾವಿಸ್ ಹಾಗೂ ಅಜಿತ್ ಪವಾರ್ ರಾಜೀನಾಮೆ ನೀಡುವಂತೆ ಅವು ಆಗ್ರಹಿಸಿವೆ.
‘‘ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಪುಣೆಯಂತಹ ನಗರದಲ್ಲಿ ಗ್ಯಾಂಗ್ವಾರ್ ದಿನಚರಿಯಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿರುವುದನ್ನು ಪ್ರತಿಬಿಂಬಿಸಿದೆ. ಆಡಳಿತಾರೂಡ ಮೈತ್ರಿಕೂಟದ ಮಿತ್ರ ಪಕ್ಷದ ನಾಯಕ ಸುರಕ್ಷಿತರಲ್ಲದೆ ಇದ್ದರೆ, ಸಾಮಾನ್ಯ ಜನರಿಗೆ ಸರಕಾರ ರಕ್ಷಣೆ ನೀಡುವುದು ಹೇಗೆ ?’’ ಎಂದು ಎನ್ಸಿಪಿ (ಎಸ್ಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನ ಪೋಸ್ಟ್ ನಲ್ಲಿ, ಸಿದ್ದೀಕ್ ಅವರ ದುರಂತ ಸಾವು ಆಘಾತ ಉಂಟು ಮಾಡಿದೆ. ಈ ಸಂದರ್ಭ ನಾನು ಅವರ ಕುಟುಂಬ, ಗೆಳೆಯರು ಹಾಗೂ ಬೆಂಬಲಿಗರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಕುರಿತು ರಾಜ್ಯ ಸರಕಾರ ಕೂಲಂಕಷ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ಅಪರಾಧಿಗಳನ್ನು ಆದಷ್ಟು ಬೇಗ ಕಾನೂನಿನ ಮುಂದೆ ತರಬೇಕು ಎಂದಿದ್ದಾರೆ.
ಎಐಸಿಸಿಯ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಾಲ್ ‘ಎಕ್ಸ್’ನ ಪೋಸ್ಟ್ನಲ್ಲಿ ಸಿದ್ದೀಕ್ ಅವರ ಹತ್ಯೆ ಮುಂಬೈಯಲ್ಲಿನ ಸಂಪೂರ್ಣ ಅರಾಜಕತೆಯನ್ನು ತೋರಿಸಿದೆ ಎಂದಿದ್ದಾರೆ.
► ಆರೋಪಿಗಳ ಹೆಸರು ಬಿಡುಗಡೆ
ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳ ಹೆಸರನ್ನು ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇಬ್ಬರು ಬಂಧಿತರಲ್ಲಿ ಓರ್ವ ಹರ್ಯಾಣದ ಗುರ್ಮಾಲಿ ಸಿಂಗ್ ಹಾಗೂ ಇನ್ನೋರ್ವ ಉತ್ತರಪ್ರದೇಶದ ಧರ್ಮರಾಜ್ ಕಶ್ಯಪ್. ಶಿವಂ ಗೌತಮ್ ಎಂಬ ಹೆಸರಿನ ಮೂರನೇ ಆರೋಪಿ ಪ್ರಸಕ್ತ ತಲೆಮರೆಸಿಕೊಂಡಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ‘‘ಮೂರನೇ ಆರೋಪಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮುಂಬೈ ಕ್ರೈಮ್ ಬ್ರಾಂಚ್ನ ಹಲವು ತಂಡಗಳು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ’’ ಎಂದು ಎಂದು ಪೊಲೀಸರ ಹೇಳಿಕೆ ತಿಳಿಸಿದೆ.