ಇವಿಎಂಗಳ ಕುರಿತು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಲೇಬೇಕು: ಕಪಿಲ್ ಸಿಬಲ್

Update: 2024-10-13 14:31 GMT

Photo: PTI

ಹೊಸದಿಲ್ಲಿ : ಇತ್ತೀಚೆಗಷ್ಟೇ ಮುಗಿದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗಿದ್ದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಕುರಿತು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಸ್ಪಷ್ಟನೆಯನ್ನು ನೀಡಲೇಬೇಕು ಎಂದು ರಾಜ್ಯಸಭಾ ಸದಸ್ಯ ಕಪಿಲ ಸಿಬಲ್ ಅವರು ರವಿವಾರ ಇಲ್ಲಿ ಹೇಳಿದರು.

ಚುನಾವಣೆಗಳಲ್ಲಿ ಇವಿಎಮ್ ಗಳು ದುರ್ಬಳಕೆಯಾಗುತ್ತಿವೆ ಎಂದು ಅವರು ಅಭಿಪ್ರಾಯಿಸಿದರು. ಹರ್ಯಾಣ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಸಂದರ್ಭದಲ್ಲಿ ಇವಿಎಮ್ ಗಳಲ್ಲಿ ಅಸಮಂಜಸತೆಗಳ ಬಗ್ಗೆ ಬುಧವಾರ ಚುನಾವಣಾ ಆಯೋಗಕ್ಕೆ ಏಳು ದೂರುಗಳನ್ನು ಸಲ್ಲಿಸಿದ್ದ ಕಾಂಗ್ರೆಸ್ ಶುಕ್ರವಾರ ಇನ್ನಷ್ಟು ದೂರುಗಳನ್ನು ಸಲ್ಲಿಸಿದೆ.

ಅ.8ರಂದು ಮತ ಎಣಿಕೆ ಸಂದರ್ಭದಲ್ಲಿ ಕೆಲವು ಇವಿಎಮ್ ಗಳ ಬ್ಯಾಟರಿಗಳು ಶೇ.99ರಷ್ಟು ಚಾರ್ಜ್ ಆಗಿದ್ದವು ಎಂದು 20 ವಿಧಾನಸಭಾ ಕ್ಷೇತ್ರಗಳಲ್ಲಿಯ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ದೂರುಗಳಲ್ಲಿ ಆರೋಪಿಸಿದ್ದಾರೆ.

ಆರೋಪಗಳ ಕುರಿತು ಪ್ರಶ್ನೆಗೆ ಸಿಬಲ್, ‘ಇವಿಎಮ್ ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ಆ ಕುರಿತು ಪುರಾವೆಗಳನ್ನು ಒದಗಿಸುತ್ತಿದೆ. ಹೀಗಾಗಿ ಆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ಆ ಕುರಿತು ಚುನಾವಣಾ ಆಯೋಗವು ಸ್ಪಷ್ಟನೆಯನ್ನು ನೀಡುವುದು ಅಗತ್ಯವಾಗಿದೆ. ಇವಿಎಮ್ ಗಳ ದುರ್ಬಳಕೆ ನಡೆಯುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಎನ್ನುವುದನ್ನು ನಾನು ಹೇಳಲು ಸಾಧ್ಯವಿಲ್ಲ ’ ಎಂದು ಉತ್ತರಿಸಿದರು.

‘ಆರಂಭದಿಂದಲೂ ನಾನು ಇದಕ್ಕೆ ವಿರುದ್ಧವಾಗಿದ್ದೇನೆ. ನಾನು ಹಿಂದೆ ಅನೇಕ ಹೇಳಿಕೆಗಳನ್ನು ನೀಡಿದ್ದೇನೆ. ಅಪಾರದರ್ಶಕವಾಗಿರುವುದನ್ನು ಒಪ್ಪಲೇಬಾರದು ’ ಎಂದು ಮಾಜಿ ಕಾಂಗ್ರೆಸ್ ನಾಯಕ ಸಿಬಲ್ ಹೇಳಿದರು.

ಹರ್ಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ‘ಅನಿರೀಕ್ಷಿತವಾಗಿದ್ದವು ’ಎಂದು ಹೇಳಿರುವ ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಇವಿಎಮ್ ಗಳ ಅಸಮಂಜಸತೆಗಳನ್ನು ಆರೋಪಿಸಿದೆ.

‘ಅ.9ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಹವಾಲಿನ ಮುಂದುವರಿದ ಭಾಗವಾಗಿ ಹರ್ಯಾಣದ 20 ವಿಧಾನಸಭಾ ಕ್ಷೇತ್ರಗಳಲ್ಲಿಯ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಮತ್ತು ಸ್ಪಷ್ಟ ಅಕ್ರಮಗಳನ್ನು ಎತ್ತಿ ತೋರಿಸಿರುವ ಹೊಸ ಜ್ಞಾಪಕಪತ್ರವನ್ನು ನಾವು ಈಗ ಆಯೋಗಕ್ಕೆ ಸಲ್ಲಿಸಿದ್ದೇವೆ. ಆಯೋಗವು ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತದೆ ಮತ್ತು ಸೂಕ್ತ ನಿರ್ದೇಶನಗಳನ್ನು ಹೊರಡಿಸುತ್ತದೆ ಎಂದು ನಾವು ಆಶಿಸಿದ್ದೇವೆ ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈ ರಾಮ್ ರಮೇಶ್ ಅವರು ಶುಕ್ರವಾರ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದರು.

ಮತ ಎಣಿಕೆ ಸಂದರ್ಭದಲ್ಲಿ ಹೆಚ್ಚಿನ ಇವಿಎಮ್ ಗಳ ಬ್ಯಾಟರಿಗಳು ಶೇ.80ಕ್ಕೂ ಕಡಿಮೆ ಚಾರ್ಜ್ ಹೊಂದಿದ್ದರೆ ಕೆಲವು ಶೇ.99ರಷ್ಟು ಚಾರ್ಜ್ ಹೊಂದಿದ್ದವು ಎಂದು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ತಮ್ಮ ಲಿಖಿತ ದೂರುಗಳಲ್ಲಿ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಬ್ಯಾಟರಿ ಚಾರ್ಜ್ ಶೇ.80ಕ್ಕಿಂತ ಕಡಿಮೆಯಿದ್ದ ಇವಿಎಮ್ ಗಳ ಪೈಕಿ ಹೆಚ್ಚಿನವುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ಇವಿಎಂ ಬ್ಯಾಟರಿಗಳ ಶೇಕಡಾವಾರು ಪ್ರಮಾಣ ಗಂಭೀರ ಶಂಕೆಗಳನ್ನು ಸೃಷ್ಟಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯೋರ್ವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News