ಕೋಲ್ಕತಾ | 9ನೇ ದಿನಕ್ಕೆ ಕಾಲಿರಿಸಿದ ಕಿರಿಯ ವೈದ್ಯರ ನಿರಶನ

Update: 2024-10-13 14:43 GMT

Photo: PTI

ಕೋಲ್ಕತಾ : ನಗರದ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯೊಬ್ಹರ ಅತ್ಯಾಚಾರ ಹಾಗೂ ಕೊಲೆ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಮುಷ್ಕರವು ರವಿವಾರ 9ನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯದ ವಿವಿಧೆಡೆ ಜನರು ಸಾಂಕೇತಿಕ ಉಪವಾಸವನ್ನು ನಡೆಸಿದರೆಂದು ವರದಿಗಳು ತಿಳಿಸಿವೆ.

ಕೋಲ್ಕತಾ ಹಾಗೂ ಸಿಲಿಗುರಿ ನಗರಗಳಲ್ಲಿ ಅಮರಣಾಂತ ನಿರಶನವನ್ನು ಕೈಗೊಂಡಿರುವ ಮೂವರು ಕಿರಿಯ ವೈದ್ಯರ ದೇಹಸ್ಥಿತಿ ಬಿಗಡಾಯಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕಿರಿಯ ವೈದ್ಯರುಗಳ ದೇಸ್ಥಿತಿ ಹದಗೆಟ್ಟಿದ್ದರೂ, ರಾಜ್ಯ ಸರಕಾರವು ಅದರ ಗೊಡವೆಯೇ ಇಲ್ಲದಂತೆ ವರ್ತಿಸುತ್ತಿದೆಯೆಂದು ಪ್ರತಿಭಟನಾ ನಿರತ ಜೂನಿಯರ್ ವೈದ್ಯರುಗಳ ವೇದಿಕೆಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ನಿರಶನನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯ ಹಳೆಯ ವಿದ್ಯಾರ್ಥಿಗಳ ತಂಡವೊಂದು 12 ತಾಸುಗಳ ಉಪವಾಸ ಮುಷ್ಕರ ನಡೆಸಲು ಆಸ್ಪತ್ರೆಯ ಆವರಣಕ್ಕೆ ಆಗಮಿಸಿತ್ತು. ಆದರೆ ಅಲ್ಲಿ ಭದ್ರತಾ ಕರ್ತವ್ಯಕಾಗಿ ನಿಯೋಜಿತರಾಗಿದ್ದ ಸಿಐಎಸ್ಎಫ್ ಯೋಧರು ಅವರನ್ನು ತಡೆದಿದ್ದಾರೆ. ಏನೇ ಆದರೂ, ತಾವು ಸಾಂಕೇತಿಕ ಉಪವಾಸ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಬಹುತೇಕ ಹಿರಿಯ ನಾಗರಿಕರೇ ಅಧಿಕ ಸಂಖ್ಯೆಯಲ್ಲಿದ್ದ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ನಿರಶನ ನಿರತ ಕಿರಿಯ ವೈದ್ಯರಿಗೆ ಬೆಂಬಲ ಸೂಚಿಸಿ, ಪಶ್ಚಿಮಬಂಗಾಳದ ಮಾಲ್ಡಾ ಹಾಗೂ ಮುರ್ಶಿದಾಬಾದ್ ಜಿಲ್ಲೆಗಳಲ್ಲಿಯೂ ಅನೇಕ ಮಂದಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿರುವುದಾಗಿ ವರದಿಗಳು ತಳಿಸಿವೆ.

ತಮ್ಮೊಂದಿಗೆ ಏಕತೆಯನ್ನು ಪ್ರದರ್ಶಿಸಲು ರವಿವಾರ ಅಡುಗೆರಹಿತ ದಿನವಾಗಿ ಆಚರಿಸುವಂತೆಯೂ ಪ್ರತಿಭಟನಾನಿರತ ವೈದ್ಯರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಆರ್.ಜಿ.ಕರ್ ಆಸ್ಪತ್ರೆಯ ಸಂತ್ರಸ್ತೆಗೆ ನ್ಯಾಯ ದೊರಕಿಸುವುದು, ಆರೋಗ್ಯ ಕಾರ್ಯದರ್ಶಿ ಎನ್.ನಿಗಮ್ ಅವರ ವಜಾ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತಿತರ ಕ್ರಮಗಳ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿರಿಯ ವೈದ್ಯರುಗಳು ಅನಿರ್ದಿಷ್ಟಾವಧಿ ನಿರಶನವನ್ನು ನಡೆಸುತ್ತಿದ್ದಾರೆ.

ಈ ಮಧ್ಯೆ ಪ್ರತಿಭಟನಾನಿರತ ಕಿರಿಯ ವೈದ್ಯರಗುಳಿಗೆ ಬೆಂಬಲ ವ್ಯಕ್ತಪಡಿಸಿ ಪಶ್ಚಿಮಬಂಗಾಳದ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಅಕ್ಟೋಬರ್ 14ರಿಂದ ರಾಜ್ಯದ ವೈದ್ಯಕೀಯ ಸಂಸ್ಥಾಪನೆಗಳಲ್ಲಿ 48 ತಾಸುಗಳ ಭಾಗಶಃ ಕೆಲಸ ಸ್ಥಗಿತಕಕ್ಕೆ ಕರೆ ನೀಡಿದ್ದಾರೆ. ಆದರೆ ತುರ್ತು ವೈದ್ಯಕೀಯ ಸೌಲಭ್ಯಗಳು ಕಾರ್ಯನಿರ್ವಹಿಸಲಿದೆಯೆಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಕೋಲ್ಕತಾದ ಪ್ರಮುಖ ದುರ್ಗಾಪೂಜಾ ಪೆಂಡಾಲ್ ಗಳ ಸಮೀಪದಲ್ಲಿರುವ ರೆಡ್ ರೋಡ್ ನಲ್ಲಿ ಪಶ್ಚಿಮಬಂಗಾಳ ಸರಕಾರವು ಸಂಘಟಿಸಿರುವ ಕಾನಿರ್ವಲ್ ಮೇಳಕ್ಕೆ ಪ್ರತಿಯಾಗಿ ಪಶ್ಚಿಮಬಂಗಾಳ ವೈದ್ಯರ ಜಂಟಿ ವೇದಿಕೆ ಕೂಡಾ, ಅಕ್ಟೋಬರ್ 15ರಂದು ಕೋಲ್ಕತಾದ ಎಸ್ಪಾನೇಡ್ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News