2023ರಲ್ಲಿ ಭಾರತದ ಮನವಿಯ ಮೇರೆಗೆ 100 ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್‌ಪೋಲ್
ಹೊಸದಿಲ್ಲಿ: ಭಾರತದ ಕಾನೂನು ಜಾರಿ ಪ್ರಾಧಿಕಾರಗಳಿಗೆ ಅಗತ್ಯವಿರುವ ದೇಶದ ಎಲ್ಲೆಯನ್ನು ದಾಟಿರುವ ದೇಶ ಭ್ರಷ್ಟರನ್ನು ತಮ್ಮ ವ್ಯಾಪ್ತಿಗಳಲ್ಲಿ ಸೆರೆ ಹಿಡಿಯಲು ಜಗತ್ತಿನಾದ್ಯಂತ ಇರುವ ಪೊಲೀಸರಿಗೆ ಇಂಟರ್‌ಪೋಲ್ 2023ರಲ್ಲಿ 100 ರೆಡ್ ಕಾರ್ನರ್ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು, ಇದು ವರ್ಷವೊಂದರಲ್ಲೇ ಅತ್ಯಧಿಕವಾಗಿದೆ ಎಂದು ಗುರುವಾರ ಸಿಬಿಐ ಮುಖ್ಯಸ್ಥ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಸಿಬಿಐ ಆಯೋಜಿಸಿದ್ದ 10ನೇ ಇಂಟರ್‌ಪೋಲ್ ಮಧ್ಯಸ್ಥಿಕೆ ಅಧಿಕಾರಿಗಳ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರವೀಣ್ ಸೂದ್, ಇಂಟರ್‌ಪೋಲ್ ಹಾಗೂ ಅಂತಾರಾಷ್ಟ್ರೀಯ ಕಾನೂನು ಜಾರಿ ಪಾಲುದಾರರ ನೆರವಿನೊಂದಿಗೆ 2023ರಲ್ಲಿ 23 ವಾಂಟೆಡ್ ಕ್ರಿಮಿನಲ್‌ಗಳು ಹಾಗೂ 2024ರಲ್ಲಿ 19 ಕ್ರಿಮಿನಲ್‌ಗಳನ್ನು ಭಾರತಕ್ಕೆ ಕರೆ ತರಲಾಗಿದೆ ಎಂದು ಹೇಳಿದ್ದಾರೆ.
ಸಿಬಿಐನ ಜಾಗತಿಕ ಕಾರ್ಯಾಚರಣೆ ಕೇಂದ್ರವು 2023ರಲ್ಲಿ 17,368 ಅಂತಾರಾಷ್ಟ್ರೀಯ ನೆರವು ಮನವಿಗಳನ್ನು ನಿಭಾಯಿಸಿದೆ ಎಂದು ಅವರು ತಿಳಿಸಿದ್ದಾರೆ.
ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಕೂಡಾ ಸಿಬಿಐನ ಜಾಗತಿಕ ಕಾರ್ಯಾಚರಣೆ ಕೇಂದ್ರವನ್ನು ಶ್ಲಾಘಿಸಿ, ಜಾಗತಿಕ ಕಾರ್ಯಾಚರಣೆ ಕೇಂದ್ರವು ದೈನಂದಿನ ಆಧಾರದಲ್ಲಿ 200-300 ಒಳ ಮತ್ತು ಹೊರ ಮನವಿಗಳನ್ನು ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.