ಇಸ್ರೇಲ್ ನಲ್ಲಿ ಸಿಕ್ಕಿಕೊಂಡಿರುವ ಭಾರತೀಯರಿಗಾಗಿ ರಾಯಭಾರ ಕಚೇರಿಯಿಂದ ಸಹಾಯವಾಣಿ
ಹೊಸದಿಲ್ಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವಂತೆಯೇ, ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗಾಗಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ದಿನದ 24 ಗಂಟೆ ಕಾರ್ಯಾಚರಿಸುವ ಸಹಾಯವಾಣಿಯನ್ನು ತೆರೆದಿದೆ. ಭದ್ರತಾ ಸಲಹೆಗಳನ್ನು ಪಾಲಿಸುವಂತೆ ಅದು ಭಾರತೀಯರಿಗೆ ಸೂಚನೆ ನೀಡಿದೆ.
ಭಾರತೀಯರಿಗೆ ನೆರವು ನೀಡುವುದಕ್ಕಾಗಿ ತಾನು ನಿರಂತರವಾಗಿ ಕೆಲಸ ಮಾಡುತ್ತಿರುವುದಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
‘‘ಇಸ್ರೇಲ್ ನಲ್ಲಿರುವ ಭಾರತೀಯರಿಗಾಗಿ ರಾಯಭಾರ ಕಚೇರಿಯು ದಿನದ 24 ಗಂಟೆ ಕಾರ್ಯಾಚರಿಸುವ ಸಹಾಯವಾಣಿಯ ಮೂಲಕ ನಿರಂತರವಾಗಿ ಕೆಲಸ ಮಾಡುತ್ತಿದೆ. ದಯವಿಟ್ಟು ಶಾಂತರಾಗಿರಿ, ಎಚ್ಚರಿಕೆಯಿಂದಿರಿ ಮತ್ತು ಭದ್ರತಾ ಸಲಹೆಗಳನ್ನು ಪಾಲಿಸಿ’’ ಎಂದು ಅದು ‘ಎಕ್ಸ್’ನಲ್ಲಿ ಬರೆದಿದೆ.
ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು +972-35226748 ಮತ್ತು +972-543278392- ಈ ಫೋನ್ ಸಂಖ್ಯೆಗಳಲ್ಲಿ ನಿರಂತರವಾಗಿ ನೆರವು ಕೋರಬಹುದಾಗಿದೆ. ಇಮೇಲ್ (cons1.telaviv@mea.gov.in) ಮೂಲಕವೂ ಭಾರತಿಯರು ನೆರವು ಕೋರಬಹುದಾಗಿದೆ.
ಈ ನಡುವೆ, ಆಂಧ್ರಪ್ರದೇಶ ಸರಕಾರಕ್ಕೆ ಒಳಪಟ್ಟಿರುವ ಆಂಧ್ರಪ್ರದೇಶ ಅನಿವಾಸಿ ತೆಲುಗು ಸೊಸೈಟಿ (ಎಪಿಎನ್ಆರ್ಟಿಎಸ್) ಕೂಡ 24/7 ತುರ್ತು ಸಹಾಯವಾಣಿಯನ್ನು ತೆರೆದಿದೆ. ಅದರ ದೂರವಾಣಿ ಸಂಖ್ಯೆಗಳು ಹೀಗಿವೆ: +91 8500027678 ಮತ್ತು 0863-2340678.