ಬಾಬರಿ ಮಸೀದಿ ದ್ವಾರದ ಬೀಗ ತೆರವುಗೊಳಿಸಿದ್ದು ರಾಜೀವ್ ಅಲ್ಲ, ಕಾಂಗ್ರೆಸ್ : ಮಣಿಶಂಕರ್ ಅಯ್ಯರ್
ಹೊಸದಿಲ್ಲಿ : ಬಾಬರಿ ಮಸೀದಿಯ ದ್ವಾರಗಳ ಬೀಗ ತೆರವಿಗೆ ಕಾಂಗ್ರೆಸ್ ಪಕ್ಷ ಕಾರಣವೇ ಹೊರತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಆ ಘಟನೆಯ ಹಿಂದೆ ಇದ್ದದ್ದು ‘‘ಬಿಜೆಪಿಯ ಪ್ರತಿನಿಧಿ’’ಯಾಗಿದ್ದ ಅರುಣ್ ನೆಹರೂ ಎಂದು ಅವರು ಹೇಳಿಕೊಂಡಿದ್ದಾರೆ.
‘‘ರಾಜೀವ್ ಗಾಂಧಿ ಬದುಕಿದ್ದಿದ್ದರೆ ಮತ್ತು ಪಿ.ವಿ. ನರಸಿಂಹ ರಾವ್ ಬದಲಿಗೆ ಅವರು ಪ್ರಧಾನಿಯಾಗಿದ್ದರೆ, ಬಾಬರಿ ಮಸೀದಿಯು ಈಗಲೂ ಇರುತ್ತಿತ್ತು. ಬಿಜೆಪಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುತ್ತಿತ್ತು ಮತ್ತು ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವಂಥದೇ ಪರಿಹಾರವೊಂದನ್ನು ಅವರು ಕಂಡುಹಿಡಿಯುತ್ತಿದ್ದರು’’ ಎಂದು ಅಯ್ಯರ್ ಹೇಳಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸುವ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವದ ನಿರ್ಧಾರವನ್ನು ಅವರು ಶ್ಲಾಘಿಸಿದರು.
ಶುಕ್ರವಾರ ನಡೆದ ತನ್ನ ಪುಸ್ತಕ ‘ದ ರಾಜೀವ್ ಐ ನ್ಯೂ ಆ್ಯಂಡ್ ವೈ ಹೀ ವಾಸ್ ಇಂಡಿಯಾಸ್ ಮೋಸ್ಟ್ ಮಿಸ್ ಅಂಡರ್ಸ್ಟುಡ್ ಪ್ರೈಮ್ ಮಿನಿಸ್ಟರ್’ನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಜಗರ್ನಾಟ್ ಸಂಸ್ಥೆಯು ಪುಸ್ತಕವನ್ನು ಪ್ರಕಟಿಸಿದೆ.
‘‘ಮಸೀದಿಯನ್ನು ಉಳಿಸಿಕೊಂಡು ದೇವಸ್ಥಾನವನ್ನು ಕಟ್ಟಿ ಎಂದು ರಾಜೀವ್ ಗಾಂಧಿ ಹೇಳುತ್ತಿದ್ದರು. ದೇವಸ್ಥಾನ ಕಟ್ಟಿ ಮತ್ತು ಮಸೀದಿಯನ್ನು ಬೇರೆ ಎಲ್ಲಿಯಾದರು ಕಟ್ಟಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ರೀತಿಯಲ್ಲಿ, ಸುಪ್ರೀಂ ಕೋರ್ಟ್ ನೀಡಿದ ಪರಿಹಾರವನ್ನೇ ಹೋಲುವ ಪರಿಹಾರವೊಂದಕ್ಕೆ ರಾಜೀವ್ ಗಾಂಧಿ ಬರುತ್ತಿದ್ದರು’’ ಎಂದು ಹಿರಿಯ ಪತ್ರಕರ್ತ ವೀರ್ ಸಾಂಘ್ವಿಯೊಂದಿಗೆ ನಡೆಸಿದ ಮುಕ್ತ ಮಾತುಕತೆಯ ವೇಳೆ ಅಯ್ಯರ್ ಹೇಳಿದರು.
‘‘ಅಟಲ್ ಬಿಹಾರಿಯ ಬಿಜೆಪಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಕದ್ದಿದ್ದಾರೆ’ ’’ ಎಂದು ಅವರು ಹೇಳಿದರು.
‘ರಾಜೀವ್ ಗೆ ಗೊತ್ತಿಲ್ಲದಂತೆ ಅರುಣ್ ನೆಹರೂ ಕಾರ್ಯಾಚರಣೆ!’
1986ರಲ್ಲಿ ಬಾಬರಿ ಮಸೀದಿ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ಯಾರು ತೆರೆದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಯ್ಯರ್, ಬೀಗವನ್ನು ತೆಗೆದ ಘಟನೆಯ ಹಿಂದೆ ಇದ್ದವರು ಅರುಣ್ ನೆಹರೂ ಎಂದು ಹೇಳಿದರು. ‘‘ಅರುಣ್ ನೆಹರೂ ಲಕ್ನೋ ಶಾಲೆಯಲ್ಲಿ ಕಲಿತವರು. ಹಾಗಾಗಿ, ಆಗ ಸ್ಥಳೀಯ ವಿಷಯವಾಗಿದ್ದ ರಾಮ ಜನ್ಮಭೂಮಿಯು ಅವರ ಮನಸ್ಸಿನಲ್ಲಿ ಇತ್ತು’’ ಎಂದರು.
‘‘ಹಾಗಾಗಿ, ಅವರು ಪಕ್ಷದಲ್ಲಿರುವ ತನ್ನ ಅಧಿಕಾರವನ್ನು ಬಳಸಿಕೊಂಡು ಅಪರಿಚಿತರಾಗಿದ್ದ ವೀರ್ ಬಹಾದುರ್ ಸಿಂಗ್ರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಡಿದರು. ಮುಖ್ಯಮಂತ್ರಿಯಾಗಿ ಅವರು ಮಾಡಿದ ಮೊದಲ ಕೆಲಸವೆಂದರೆ, ಅಯೋಧ್ಯೆಗೆ ಹೋಗಿ ವಿಶ್ವ ಹಿಂದೂ ಪರಿಷತ್ ನ ದೇವಕಿ ನಂದನ ಅಗರ್ವಾಲ್ ಮತ್ತು ಇತರರನ್ನು ಭೇಟಿ ಮಾಡಿದ್ದು.
ಬಾಬರಿ ಮಸೀದಿಯ ದ್ವಾರಕ್ಕೆ ನ್ಯಾಯಾಲಯದ ಆದೇಶದಂತೆ ಬೀಗ ಹಾಕಲಾಗಿಲ್ಲ, ಸರಕಾರದ ಆದೇಶದಂತೆ ಬೀಗ ಹಾಕಲಾಗಿದೆ ಎಂಬ ಮನವಿಯೊಂದನ್ನು ಅವರಿಂದ ಮುಖ್ಯಮಂತ್ರಿ ಪಡೆದುಕೊಂಡರು ಎಂದು ಅಯ್ಯರ್ ನುಡಿದರು.
ಬಳಿಕ, ಈ ವಿಷಯವು 1986 ಫೆಬ್ರವರಿ 1ರಂದು ಫೈಝಾಬಾದ್ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಮುಂದೆ ಬಂದಾಗ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ದ್ವಾರಕ್ಕೆ ಬೀಗ ಹಾಕುವುದು ಅಗತ್ಯವಲ್ಲ ಎಂಬ ಅಭಿಪ್ರಾಯವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ಇಬ್ಬರೂ ವ್ಯಕ್ತಪಡಿಸಿದರು.
‘‘ಬೀಗಗಳನ್ನು ತೆರೆಯಲಾಯಿತು. ಇದಕ್ಕಾಗಿಯೇ ಅಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಹಿಂದೂ ಯಾತ್ರಿಕರು ಒಳ ನುಗ್ಗಿದರು. ರಾಜೀವ್ ಗಾಂಧಿಗೆ ಇದು ಯಾವುದೂ ಗೊತ್ತಿರಲಿಲ್ಲ. ಹಾಗಾಗಿ, ಬಾಬರಿ ಮಸೀದಿಯ ದ್ವಾರಗಳ ಬೀಗ ತೆಗೆದ ಘಟನೆಯ ಹಿಂದೆ ಕಾಂಗ್ರೆಸ್ ಪಕ್ಷ ಇದ್ದದ್ದು ಹೌದು, ಆದರೆ, ಸರಕಾರದ ಆದೇಶವನ್ನು ರದ್ದುಪಡಿಸಿ ಬೀಗ ತೆರೆಯಲು ರಾಜೀವ್ ಗಾಂಧಿ ಯಾವತ್ತೂ ಅವಕಾಶ ನೀಡುವುದಿಲ್ಲ ಎನ್ನುವುದು ಆ ಕಾಂಗ್ರೆಸ್ ವ್ಯಕ್ತಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ಆ ವಿಷಯವನ್ನು ರಾಜೀವ್ ಗಾಂಧಿಯಿಂದ ಮುಚ್ಚಿಟ್ಟಿದ್ದರು’’ ಎಂದು ಅಯ್ಯರ್ ಹೇಳಿಕೊಂಡಿದ್ದಾರೆ.