‘ಜೈ ಶ್ರೀರಾಮ್’ ಘೋಷಣೆ: ಹೊಸ ವಿವಾದಕ್ಕೆ ಸಿಲುಕಿದ ತಮಿಳುನಾಡು ರಾಜ್ಯಪಾಲ

ಬಿ.ಎನ್.ರವಿ | PTI
ಚೆನ್ನೈ: ತಮಿಳುನಾಡು ರಾಜ್ಯಪಾಲ ಬಿ.ಎನ್.ರವಿ ಅವರು ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಮದುರೈನ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್ ’ ಘೋಷಣೆ ಕೂಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಕ್ಕಾಗಿ ಆಡಳಿತಾರೂಢ ಡಿಎಂಕೆ ಸರಕಾರವು ಅವರನ್ನು ತೀವ್ರವಾಗಿ ಟೀಕಿಸಿದೆ.
ಶನಿವಾರ ತ್ಯಾಗರಾಜರ್ ಇಂಜನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿದ್ದ ರವಿ ಭಾಷಣ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜೈ ಶ್ರೀರಾಮ್ ಘೋಷಣೆ ಕೂಗುವಂತೆ ರವಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದನ್ನು ಮತ್ತು ವಿದ್ಯಾರ್ಥಿಗಳು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದನ್ನು ವೀಡಿಯೊ ತೋರಿಸಿದೆ.
ರವಿ ಆರೆಸ್ಸೆಸ್ ಸಿದ್ಧಾಂತವಾದಿಯಂತೆ ವರ್ತಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಿಎಂಕೆ ವಕ್ತಾರ ಸೇಲಂ ಧರಣಿಧರನ್ ಅವರು,‘ರವಿಯವರ ನಡೆಯು ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಜ್ಯಪಾಲರು ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ನಿರ್ದಿಷ್ಟ ಧರ್ಮದ ಪದಗಳನ್ನು ಪಠಿಸುವಂತೆ ಮಾಡಿರುವುದು ದಿಗ್ಭ್ರಮೆಯನ್ನು ಮೂಡಿಸಿದೆ. ಭಾರತವು ಜಾತ್ಯತೀತ ದೇಶವಾಗಿರುವುದರಿಂದ ಕಾಲೇಜಿನ ಕಾರ್ಯಕ್ರಮಕ್ಕೆ ಇಂತಹ ಧಾರ್ಮಿಕ ಬಣ್ಣಗಳನ್ನು ನೀಡುವುದು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.
ರಾಜ್ಯಪಾಲ ರವಿ ಈ ರೀತಿ ವಿವಾದಾತ್ಮಕವಾಗಿ ವರ್ತಿಸಿದ್ದು ಇದೇ ಮೊದಲಲ್ಲ ಎಂದು ಹೇಳಿದ ಧರಣಿಧರನ್, ರಾಜ್ಯಪಾಲರು ತಮಿಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ನಾಶಗೊಳಿಸಲು ಪದೇ ಪದೇ ಪ್ರಯತ್ನಿಸಿದ್ದಾರೆ. ಅವರು ಆರೆಸ್ಸೆಸ್ ಸಿದ್ಧಾಂತವಾದಿಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.