ಜೈಪುರ | “ಹಿಂದೂಯೇತರರಿಗೆ ಆಸ್ತಿಗಳನ್ನು ಮಾರಾಟ ಮಾಡಬೇಡಿ” ಎಂದು ಪೋಸ್ಟರ್ ಗಳಲ್ಲಿ ಮನವಿ!

Update: 2024-06-12 15:20 GMT

ಸಾಂದರ್ಭಿಕ ಚಿತ್ರ |  PTI 

 

ಜೈಪುರ: ‘ಹಿಂದೂಯೇತರರಿಗೆ ಆಸ್ತಿ ಮಾರಾಟ ಮಾಡಬೇಡಿ’ ಎಂಬ ಪೋಸ್ಟರ್ಗಳು ಜೈಪುರದ ಭಟ್ಟ ಬಸ್ತಿ ಪ್ರದೇಶದ ಶಿವಾಜಿನಗರದಲ್ಲಿ ಕಾಣಿಸಿಕೊಂಡಿವೆ. ಈ ಭಿತ್ತಿ ಚಿತ್ರಗಳಲ್ಲಿ ಹಿಂದೂಗಳು ವಲಸೆ ಹೋಗುವುದನ್ನು ಸನಾತನ ಜನರು ತಡೆಯಬೇಕು ಎಂದೂ ಮನವಿ ಮಾಡಲಾಗಿದೆ.

ನಾವು ಸ್ವಯಂಪ್ರೇರಿತವಾಗಿ ನಮ್ಮ ನಿವಾಸಗಳ ಮೇಲೆ ನಮ್ಮ ಪ್ರದೇಶದಲ್ಲಿನ ಆಸ್ತಿಗಳನ್ನು ಹಿಂದೂಯೇತರರಿಗೆ ಮಾರಾಟ ಮಾಡಬೇಡಿ ಎಂದು ಪೋಸ್ಟರ್ ಗಳನ್ನು ಅಂಟಿಸಿದ್ದೇವೆ ಎಂದು ಕೆಲವು ಸ್ಥಳೀಯರು ಸುದ್ದಿವಾಹಿನಿಗಳಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯನ್ನು ಭಟ್ಟ ಬಸ್ತಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಕೈಲಾಶ್ ದೃಢಪಡಿಸಿದ್ದು, ಈ ಭಿತ್ತಿ ಚಿತ್ರಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ಸ್ವಂತ ನಿವಾಸಗಳ ಮೇಲೆ ಅಂಟಿಸಿಕೊಂಡಿದ್ದು, ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕೆಲವರು ಮನೆಗಳನ್ನು ಖರೀದಿಸುತ್ತಿರುವುದರಿಂದ ಇತರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಈ ಪರಿಸ್ಥಿತಿಯಿಂದಾಗಿ, ಸ್ಥಳೀಯರು ತಮ್ಮ ನಿವಾಸಗಳ ಮುಂದೆ ಹಿಂದೂಯೇತರರಿಗೆ ಮನೆಗಳನ್ನು ಮಾರಾಟ ಮಾಡದಂತೆ ಸ್ವಯಂಪ್ರೇರಿತವಾಗಿ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಠಾಣಾಧಿಕಾರಿ ಕೈಲಾಶ್, “ಆಸ್ತಿಯ ಮಾರಾಟ ಮತ್ತು ಖರೀದಿ ವೈಯಕ್ತಿಕ ವಿಷಯ. ಈ ಕುರಿತು ವ್ಯಾಜ್ಯ ಉದ್ಭವಿಸಿರುವ ಯಾವುದೇ ಘಟನೆಗಳು ಇದುವರೆಗೂ ನಮ್ಮ ಗಮನಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News