ಜಾಮಾ ಮಸೀದಿ | ಡಾ. ಮನಮೋಹನ್ ಸಿಂಗ್ ಸಹಿ ಮಾಡಿದ್ದ ಕಡತ ಹಾಜರುಪಡಿಸಿ ; ಪುರಾತತ್ವ ಇಲಾಖೆಗೆ ಕೊನೆಯ ಅವಕಾಶ ನೀಡಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ಮುಘಲ್ ಯುಗದ ಐತಿಹಾಸಿಕ ಜಾಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಬಾರದು ಎಂದು ನಿರ್ಧಾರ ಕೈಗೊಂಡಿದ್ದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಹಿ ಮಾಡಿದ್ದ ಕಡತವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಶುಕ್ರವಾರ ದಿಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮಸೀದಿಗೆ ಸ್ಮಾರಕವೆಂದು ಮಾನ್ಯತೆ ನೀಡಿರುವ ದಾಖಲೆ, ಅದರ ಹಾಲಿ ವಾರಸುದಾರರು ಇತ್ಯಾದಿ ಮಾಹಿತಿಗಳನ್ನು ಒದಗಿಸುವ ಬದಲು, ಬಿಡಿ ಹಾಳೆಗಳು ಹಾಗೂ ಇನ್ನಿತರ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದನ್ನು ನ್ಯಾ. ಪ್ರತಿಭಾ ಎಂ. ಸಿಂಗ್ ನೇತೃತ್ವದ ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿತು.
ಅಧಿಕಾರಿಗಳಿಗೆ ಮತ್ತೊಂದು ಕೊನೆಯ ಅವಕಾಶ ನೀಡಿದ ನ್ಯಾಯಾಲಯವು, ಅಕ್ಟೋಬರ್ ನಲ್ಲಿ ನಡೆಯಲಿರುವ ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂಬಂಧಿತ ಅಧಿಕಾರಿಯ ಪ್ರಮಾಣ ಪತ್ರ ಹಾಗೂ ಮೂಲ ಕಡತವನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ಆದೇಶಿಸಿತು.
ಈ ವಿಷಯದ ಕುರಿತು ನೇರವಾಗಿ ಮೇಲುಸ್ತುವಾರಿ ವಹಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ ನ್ಯಾಯಾಲಯವು, ಸಮಗ್ರ ಪ್ರಮಾಣ ಪತ್ರವನ್ನು ಹಾಜರು ಪಡಿಸುವುದನ್ನು ಖಾತರಿ ಪಡಿಸಲು ಕೇಂದ್ರ ಸರಕಾರದ ವಕೀಲರಾದ ಅನಿಲ್ ಸೋನಿ ಹಾಗೂ ಮನೀಷ್ ಮೋಹನ್ ಅವರೊಂದಿಗೆ ಸಭೆ ನಡೆಸುವಂತೆಯೂ ನಿರ್ದೇಶನ ನೀಡಿತು.
ಜಾಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಬೇಕು ಹಾಗೂ ಜಾಮಾ ಮಸೀದಿಯ ಸುತ್ತಮುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲು ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನಡೆಸುತ್ತಿದೆ.
ಜಾಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬಾರದು ಎಂಬ ಡಾ. ಮನಮೋಹನ್ ಸಿಂಗ್ ಅವರ ನಿರ್ಧಾರವನ್ನು ಒಳಗೊಂಡಿರುವ ಮೂಲ ಕಡತವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆಗಸ್ಟ್ 28ರಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನ್ಯಾಯಾಲಯ ಸೂಚಿಸಿತ್ತು.