ಜಮ್ಮು: ವಿದೇಶೀಯರ ವಿರುದ್ಧದ ಕಾರ್ಯಾಚರಣೆಯಲ್ಲಿ 50 ಮಂದಿಯ ಬಂಧನ

Update: 2023-12-20 15:00 GMT

ಸಾಂದರ್ಭಿಕ ಚಿತ್ರ

ಜಮ್ಮು: ನೋಂದಣಿ ಮಾಡಿಕೊಂಡಿರದ ವಿದೇಶೀಯರು ಮತ್ತು ಅವರಿಗೆ ಆಶ್ರಯ ನೀಡಿರುವವರ ವಿರುದ್ಧದ ಅಭಿಯಾನದ ಭಾಗವಾಗಿ ಜಮ್ಮು ವಿಭಾಗದ ಪೊಲೀಸರು ಮಂಗಳವಾರ ಸುಮಾರು 50 ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಮ್ಯಾನ್ಮಾರ್ನ ನೋಂದಾಯಿಸಲ್ಪಡದ ರೊಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶೀಯರನ್ನು ಪತ್ತೆಹಚ್ಚುವ ಸಲುವಾಗಿ ಈ ಅಭಿಯಾನವನ್ನು ಪೊಲೀಸರು ಆರಂಭಿಸಿದ್ದಾರೆ.

ಕಿಶ್ತ್ವಾರ್, ರಂಬನ್, ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಬಂಧನ ನಡೆದಿದೆ. ಅದೇ ವೇಳೆ, ದೋಡಾ ಜಿಲ್ಲೆಯಲ್ಲಿ 10 ರೊಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶೀಯರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಜಮ್ಮು ವಿಭಾಗದ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಾಗಿದೆ. ಪೊಲೀಸರು 20ಕ್ಕೂ ಅಧಿಕ ಸ್ಥಳಗಳಲ್ಲಿ ಮ್ಯಾಜಿಸ್ಟ್ರೇಟ್ಗಳ ಸಮ್ಮುಖದಲ್ಲಿ ಮನೆ-ಮನೆ ಶೋಧ ನಡೆಸುತ್ತಿದ್ದಾರೆ.

ಶೋಧ ಕಾರ್ಯಾಚರಣೆಯ ವೇಳೆ ಪಾನ್ ಮತ್ತು ಆಧಾರ್ ಕಾರ್ಡ್ಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ವಿಚಾರಣೆಗಾಗಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ. ಅವರು ಈ ಪ್ರದೇಶದಲ್ಲಿ ವಾಸಿಸಲು ವಲಸಿಗರಿಗೆ ನೆರವು ನೀಡಿದ್ದಾರೆ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News