ಜಮ್ಮುಕಾಶ್ಮೀರ ವಿಧಾನ ಸಭೆ ಚುನಾವಣೆ | ಮೊದಲ ಎರಡು ಹಂತಗಳಲ್ಲಿ 15 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕಣದಲ್ಲಿ ಕನಿಷ್ಠ 15 ಮಹಿಳಾ ಅಭ್ಯರ್ಥಿಗಳು ಇದ್ದಾರೆ.
ಈ 15 ಮಹಿಳಾ ಅಭ್ಯರ್ಥಿಗಳಲ್ಲಿ ಮೂವರನ್ನು ನ್ಯಾಷನಲ್ ಕಾನ್ಫರೆನ್ಸ್ (NC), ಇಬ್ಬರನ್ನು ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (PDP), ತಲಾ ಒಬ್ಬರನ್ನು ಬಿಜೆಪಿ, ಬಹುಜನ ಸಮಾಜ ಪಾರ್ಟಿ (BSP) ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (RPI)ಕಣಕ್ಕಿಳಿಸಿದೆ. ಉಳಿದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
ಅನುಕ್ರಮವಾಗಿ ಸೆಪ್ಟಂಬರ್ 18 ಹಾಗೂ 25ರಂದು ನಡೆಯಲಿರುವ ಜಮ್ಮು ಹಾಗೂ ಕಾಶ್ಮೀರದ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕಣದಲ್ಲಿ 15 ಮಹಿಳೆಯರು ಸೇರಿದಂತೆ ಒಟ್ಟು 459 ಮಂದಿ ಅಭ್ಯರ್ಥಿಗಳು ಇದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ 52 ವರ್ಷದ ಮಾಜಿ ಸಚಿವೆ ಸಕೀನಾ ಮಸೂದ್ ಅವರನ್ನು ಅವರ ಭದ್ರಕೋಟೆಯಾದ ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯ ದಂಫಾಲ್ ಹನಿಪೋರಾದಿಂದಿಂದ ಕಣಕ್ಕಿಳಿಸಿದೆ. ಪಕ್ಷ ಹಬ್ಬಾ ಕಾದಲ್ ಕ್ಷೇತ್ರದಿಂದ ಮಾಜಿ ಶಾಸಕಿ ಹಾಗೂ ಸಚಿವೆ ಶಮೀಮಾ ಫಿರ್ದೌಸ್ ಅವರನ್ನು ಹಾಗೂ ಕಿಸ್ತ್ವಾರ ಜಿಲ್ಲೆಯ ಪಡಾರ್-ನಾಗಸಿನಿಯಿಂದ 40 ವರ್ಷದ ಪೂಜಾ ಠಾಕೂರ್ ಅವರನ್ನು ನಾಮನಿರ್ದೇಶಿಸಿದೆ.
ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ 37 ವರ್ಷದ ಇಲ್ತಿಜಾ ಮುಫ್ತಿ ಅವರನ್ನು ಪಕ್ಷದ ಭದ್ರ ಕೋಟೆಯಾಗಿರುವ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಸ್ರಿಗುಫ್‌ವಾರಾ-ಬಿಬ್‌ಜೆಹ್ರಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪಕ್ಷದ ಮಾಜಿ ಸಚಿವೆ ಆಸಿಯಾ ನಖಾಶ್ ಅವರನ್ನು ಹಝ್ರತ್‌ಬಾಲ್‌ನಿಂದ ಕಣಕ್ಕಿಳಿಸಿದೆ.
ಬಿಜೆಪಿ 29 ವರ್ಷದ ಶಗುನ್ ಪರಿಹಾರ್ ಅವರನ್ನು ಕಿಸ್ತ್ವಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಬಿಎಸ್‌ಪಿ 25 ವರ್ಷದ ಮೀನಾಕ್ಷಿ ಬಾಗ್ ಅವರನ್ನು ಭದೇರ್‌ವಾಹ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಆರ್‌ಪಿಐ 56 ವರ್ಷದ ಡೈಸಿ ರೈನಾ ಅವರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ರಾಜ್‌ಪೋರಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಪಕ್ಷೇತರ ಮಹಿಳಾ ಅಭ್ಯರ್ಥಿಗಳಾದ 37 ವರ್ಷದ ಅಫ್ರೂಜಾ ಬಾನೂ ಕುಲ್ಗಾಂವ್ ಕ್ಷೇತ್ರದಿಂದ, 60 ವರ್ಷದ ಗುಲ್ಶನ್ ಅಖ್ತರ್ ಪಶ್ಚಿಮ ಅನಂತ್‌ನಾಗ್‌ನಿಂದ, 43 ವರ್ಷದ ಮೀನಾಕ್ಷಿ ಕಾಲ್ರಾ ಡೋಡಾ ಪಶ್ಚಿಮ ವಿಭಾಗದಿಂದ, ಖತೀಜಾ ಝರೀನಾ ಲಾಲ್ ಚೌಕ್‌ನಿಂದ, ಫ್ಯಾನ್ಸಿ ಅಶ್ರಫ್ ಈದ್ಗಾದಿಂದ ಹಾಗೂ ನಿಲೋಫರ್ ಸಜ್ಜಾದ್‌ಗಂಡ್ರು ಚದೂರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.