ಜಮ್ಮುಕಾಶ್ಮೀರ: ವಿಧಿ 370 ರದ್ದತಿಯ 4ನೇ ವರ್ಷಾಚರಣೆ; ಪ್ರತಿಪಕ್ಷಗಳಿಂದ ವ್ಯಾಪಕ ಪ್ರತಿಭಟನೆ

Update: 2023-08-05 16:25 GMT

ಮೆಹಬೂಬಾ ಮುಫ್ತಿ |  Photo: PTI

ಕೋಲ್ಕತಾ: ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿರುವ ನಾಲ್ಕನೇ ವರ್ಷಾಚರಣೆಯಾಗಿ ಬಿಜೆಪಿ ಶ್ರೀನಗರದಲ್ಲಿ ಶನಿವಾರ ಸಾರ್ವಜನಿಕ ಸಭೆ ನಡೆಸಿತು. ಇದೇ ಸಂದರ್ಭ ಕಾಂಗ್ರೆಸ್ ಹಾಗೂ ಪಿಡಿಪಿ ಸೇರಿದಂತೆ ಹಲವು ಪ್ರತಿಪಕ್ಷಗಳು ಈ ನಡೆ ಖಂಡಿಸಿ ಜಮ್ಮು ಹಾಗೂ ಕಾಶ್ಮೀರದಾದ್ಯಂತ ‘ಕರಾಳ ದಿನ’ ಆಚರಿಸಿದವು.

ಜವಾಹರ್ ನಗರದಲ್ಲಿ ನಡೆದ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿಯ ಜಮ್ಮು ಹಾಗೂ ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಅವರ ನೇತೃತ್ವದಲ್ಲಿ ಪಕ್ಷದ ಜಮ್ಮು ಹಾಗೂ ಕಾಶ್ಮೀರ ಘಟಕದ ಹಲವು ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ವಿಧಿ 370ರ ಹೆಸರಲ್ಲಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವ ಪಕ್ಷದ ನಾಯಕರನ್ನು ಖಂಡಿಸುವ ಹಾಗೂ ಈ ವಲಯದಲ್ಲಿ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡುವ ನೀಡುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಬಿಜೆಪಿ ಘಟಕ ಹೇಳಿದೆ.

ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನ ಜಮ್ಮು ಹಾಗೂ ಕಾಶ್ಮೀರ ವರಿಷ್ಠ ವಿಕಾರ್ ರಸೂಲ್ ವಾನಿ ಅವರ ನೇತೃತ್ವದಲ್ಲಿ ಪಕ್ಷದ ಸದಸ್ಯರು ಜಮ್ಮುವಿನ ಶಹೀದಿ ಚೌಕ್ ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯ ಹೊರಗೆ ಶಾಂತಿಯುತ ಧರಣಿ ನಡೆಸಿದರು. ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರು ಸ್ಥಾಪಿಸುವಂತೆ, ಭೂಹಕ್ಕನ್ನು ರಕ್ಷಿಸುವಂತೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ. 100 ಮೀಸಲಾತಿ ನೀಡುವಂತೆ ಅವರು ಆಗ್ರಹಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.

ಈ ವಲಯ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರವನ್ನು ಎದುರಿಸುತ್ತಿದೆ. ಆರೋಗ್ಯ ಹಾಗೂ ಶಿಕ್ಷಣದಂತಹ ಅಗತ್ಯದ ವಲಯಗಳು ಅಸ್ತವ್ಯಸ್ತವಾಗಿವೆ ಎಂದು ಅವರು ಪ್ರತಿಪಾದಿಸಿದರು.

ಶಿವಸೇನೆ (ಯುಬಿಟಿ) ನಾಯಕ ಮನೀಶ್ ಸಹಾನಿ ನೇತೃತ್ವದಲ್ಲಿ ಜಮ್ಮುವಿನ ಚನ್ನಿ ಹಮ್ಮತ್ನಲ್ಲಿರುವ ಪಕ್ಷದ ಕಚೇರಿಯ ಹೊರಗೆ ಪ್ರತ್ಯೇಕ ಪ್ರತಿಭಟನೆ ನಡೆಯಿತು. ಅವರು ಕೇಂದ್ರ ಸರಕಾರದ ನೀತಿಯನ್ನು ಟೀಕಿಸಿದರು. ಯುವ ಜನರ ಎದುರಿಸುತ್ತಿರುವ ನಿರುದ್ಯೋಗ, ನಾರ್ಕೊ ಭಯೋತ್ಪಾದನೆಯ ಪರಿಣಾಮ, ಕಾಶ್ಮೀರಿ ಪಂಡಿತರು ಹಿಂದಿರುಗುವ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಗಮನ ಸೆಳೆದರು. ಪಿಡಿಪಿ ಜಮ್ಮುವಿನ ಗಾಂಧಿ ನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿತು. ಆದರೆ, ಪೊಲೀಸರು ಮಧ್ಯ ಪ್ರವೇಶಿಸಿದರು ಹಾಗೂ ಪ್ರತಿಭಟನಕಾರರು ಬೀದಿಗಿಳಿಯದಂತೆ ತಡೆದರು. ಈ ನಡುವೆ ಡೋಗ್ರಾ ಸ್ವಾಭಿಮಾನ್ ಸಂಘಟನ್ ಪಾರ್ಟಿ (ಡಿಎಸ್ಎಸ್ಪಿ)ಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಲಾಲ್ ಸಿಂಗ್, ಈ ದಿನ ಜಮ್ಮು ಹಾಗೂ ಕಾಶ್ಮೀರಕ್ಕೆ ಕೆಟ್ಟ ದಿನ ಎಂದು ಹೇಳಿದರು. ಅಲ್ಲದೆ, ಬಿಜೆಪಿ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿದ ನಾಲ್ಕನೇ ವರ್ಷವಾದ ಶನಿವಾರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಜಮ್ಮು ಹಾಗೂ ಕಾಶ್ಮೀರದ ಇತರ ರಾಜಕೀಯ ನಾಯಕರಿಗೆ ಗೃಹ ಬಂಧನ ವಿಧಿಸಲಾಗಿತ್ತು. ಮುಫ್ತಿ ಅವರ ಪಿಡಿಪಿ ಪಿಚಾರ ಸಂಕಿರಣ ನಡೆಸಲು ಅನುಮತಿ ನೀಡುವಂತೆ ಕೋರಿತ್ತು. ಆದರೆ, ಆಡಳಿತ ಅನುಮತಿ ನೀಡಲು ನಿರಾಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News