ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ | 2ನೇ ಹಂತದ ಚುನಾವಣಾ ಕಣದಲ್ಲಿ ಕೋಟ್ಯಾಧೀಶರು, ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳ ಪ್ರಾಬಲ್ಯ

Update: 2024-09-17 15:04 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಕಣದಲ್ಲಿರುವ ಐದನೇ ಒಂದಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಇಂತಹ ಅಭ್ಯರ್ಥಿಗಳ ಶೇಕಡಾವಾರು ಪ್ರಮಾಣದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ.

238 ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್),ಈ ಪೈಕಿ 49 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದು,ಇವರಲ್ಲಿ 37 ಅಭ್ಯರ್ಥಿಗಳು (ಶೇ.16) ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊತ್ತಿದ್ದಾರೆ ಎಂದು ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ. ಗಂಭೀರ ಕ್ರಿಮಿನಲ್ ಆರೋಪಗಳ ವರ್ಗದಲ್ಲಿ, ಮೂವರು ಕೊಲೆ ಯತ್ನ ಮತ್ತು ಏಳು ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ಹೊತ್ತಿದ್ದರೆ ಓರ್ವ ಅತ್ಯಾಚಾರ ಆರೋಪಿಯಾಗಿದ್ದಾನೆ.

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಜೆಕೆಪಿಡಿಪಿಯ 26ರಲ್ಲಿ ನಾಲ್ವರು(ಶೇ.15),ಬಿಜೆಪಿಯ 17ರಲ್ಲಿ ನಾಲ್ವರು(ಶೇ.24),ಕಾಂಗ್ರೆಸ್‌ನ 6ರಲ್ಲಿ ಇಬ್ಬರು(ಶೇ.33) ಮತ್ತು ಜೆಕೆಎನ್‌ಸಿಯ 20ರಲ್ಲಿ ಓರ್ವ ಅಭ್ಯರ್ಥಿ(ಶೇ.5) ಸೇರಿದ್ದಾರೆ.

ವಿಶ್ಲೇಷಣೆಯ ಆಧಾರದಲ್ಲಿ ಎರಡನೇ ಹಂತದ ಮತದಾನ ನಡೆಯುವ 26 ಕ್ಷೇತ್ರಗಳ ಪೈಕಿ ಎಂಟು ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ಕಣದಲ್ಲಿಯ ಮೂವರು ಅಥವಾ ಹೆಚ್ಚಿನ ಸ್ಪರ್ಧಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದರೆ ಅದನ್ನು ರೆಡ್ ಅಲರ್ಟ್ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ.

ಕಣದಲ್ಲಿರುವ ಅರ್ಧಕ್ಕೂ ಹೆಚ್ಚಿನ ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದಾರೆ ಎಂದೂ ವಿಶ್ಲೇಷಣೆಯು ತೋರಿಸಿದೆ.

ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು (ಶೇ.100) ಕೋಟ್ಯಾಧೀಶರಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಜೆಕೆಎನ್‌ಸಿ( ಶೇ.90),ಬಿಜೆಪಿ (ಶೇ.76) ಇದ್ದರೆ ಜೆಕೆಪಿಡಿಪಿ ಕನಿಷ್ಠ ಸಂಖ್ಯೆಯ ಕೋಟ್ಯಾಧೀಶರನ್ನು ಕಣಕ್ಕಿಳಿಸಿದೆ.

ಚನ್ನಪೋರಾದಿಂದ ಸ್ಪರ್ಧಿಸಿರುವ ಜಮ್ಮುಕಾಶ್ಮೀರ ಅಪ್ನಿ ಪಾರ್ಟಿಯ ಸೈಯದ್ ಮುಹಮ್ಮದ್ ಅಲ್ತಾಫ್ ಬುಖಾರಿ 162 ಕೋಟಿ ರೂ.ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರೆ ಪೂಂಛ್‌ನಲ್ಲಿ ಕಣದಲ್ಲಿರುವ ಪಕ್ಷೇತರ ಮುಹಮ್ಮದ್ ಅಕ್ರಂ ಕೇವಲ 500 ರೂ.ಮೌಲ್ಯದ ಕನಿಷ್ಠ ಆಸ್ತಿಯನ್ನು ಹೊಂದಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳ ಸರಸರಿ ಆಸ್ತಿ ಮೌಲ್ಯ 5.80 ಕೋಟಿ ರೂ.ಗಳಾಗಿವೆ. 41ರಿಂದ 60 ವರ್ಷ ವಯೋಮಾನದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ 25ರಿಂದ 40 ವರ್ಷ ವಯೊಮಾನದವರು ನಂತರದ ಸ್ಥಾನದಲ್ಲಿದ್ದಾರೆ.

ಸುಮಾರು ಅರ್ಧದಷ್ಟು(ಶೇ.49) ಅಭ್ಯರ್ಥಿಗಳು ಐದರಿಂದ 12ನೇ ತರಗತಿವರೆಗೆ ವಿದ್ಯಾರ್ಹತೆಗಳನ್ನು ಹೊಂದಿದ್ದು.ಶೇ.48ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಹೆಚ್ಚಿನ ಶಿಕ್ಷಣವನ್ನು ಹೊಂದಿದ್ದಾರೆ. ಆರು ಅಭ್ಯರ್ಥಿಗಳು ಡಿಪ್ಲೋಮಾ ಪಡೆದಿದ್ದರೆ ಓರ್ವ ಅಭ್ಯರ್ಥಿ ಅನಕ್ಷರಸ್ಥರಾಗಿದ್ದಾನೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News