ಜಮ್ಮು-ಕಾಶ್ಮೀರ | ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆ ನಡೆಸಲು ಸಿಇಸಿ ನಕಾರ

Update: 2024-03-16 16:13 GMT

ರಾಜೀವ್‌ ಕುಮಾರ್‌ | Photo: PTI  

ಹೊಸದಿಲ್ಲಿ : ಜಮ್ಮು-ಕಾಶ್ಮೀರ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಸುವ ಕುರಿತು ಎಲ್ಲ ಊಹಾಪೋಹಗಳಿಗೆ ಶನಿವಾರ ಅಂತ್ಯ ಹಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್‌ ಕುಮಾರ್‌ ಅವರು,ಭದ್ರತಾ ಕಾರಣಗಳಿಂದಾಗಿ ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು ಪ್ರಕಟಿಸಿದರು.

‘ನಮ್ಮ ಇತ್ತೀಚಿನ ಜಮ್ಮು-ಕಾಶ್ಮೀರ ಭೇಟಿ ಸಂದರ್ಭದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವಂತೆ ಅಲ್ಲಿಯ ಎಲ್ಲ ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು ಮತ್ತು ನಾವು ಅದನ್ನು ಗೌರವಿಸುತ್ತೇವೆ. ಆದರೆ ಏಕಕಾಲಿಕ ಚುನಾವಣೆಗಳನ್ನು ನಡೆಸಲು ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳ ನಿಯೋಜನೆ ಅಗತ್ಯವಾಗಿರುವುದರಿಂದ ಇಡೀ ಆಡಳಿತ ಯಂತ್ರವು ಈ ಆಲೋಚನೆಗೆ ವಿರುದ್ಧವಾಗಿದೆ ಎಂದು ಲೋಕಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕುಮಾರ್‌ ತಿಳಿಸಿದರು.

‘ಒಂದು ವಿಧಾನಸಭಾ ಕ್ಷೇತ್ರದಿಂದ ಸರಾಸರಿ 10-12 ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂದಿಟ್ಟುಕೊಂಡರೆ 90 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಒಂದು ಸಾವಿರವನ್ನು ಸಮೀಪಿಸುತ್ತದೆ. ಜಮ್ಮು-ಕಾಶ್ಮೀರದಲ್ಲಿಯ ಭದ್ರತಾ ಪರಿಸ್ಥಿತಿಯಿಂದಾಗಿ ಎಲ್ಲ ಅಭ್ಯರ್ಥಿಗಳಿಗೂ ಭದ್ರತೆಯನ್ನು ಒದಗಿಸಲು ಹೆಚ್ಚುವರಿಯಾಗಿ 450ರಿಂದ 500 ಕಂಪನಿಗಳಷ್ಟು ಭದ್ರತಾ ಸಿಬ್ಬಂದಿಗಳು ಅಗತ್ಯವಾಗುತ್ತಾರೆ. ದೇಶಾದ್ಯಂತ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವಾಗ ಹೆಚ್ಚುವರಿ ಭದ್ರತೆಯನ್ನು ಒದಗಿಸುವುದು ಅಸಾಧ್ಯ. ಆದರೆ ಲೋಕಸಭಾ ಚುನಾವಣೆಗಳು ಮುಗಿದ ಬಳಿಕ ಶೀಘ್ರವೇ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ ’ ಎಂದು ಅವರು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವಲ್ಲಿ ವಿಳಂಬಕ್ಕೆ ಚುನಾವಣಾ ಆಯೋಗವು ಯಾವುದೇ ರೀತಿಯಲ್ಲಿಯೂ ಜವಾಬ್ದಾರವಲ್ಲ ಎಂದು ಸಮರ್ಥಿಸಿಕೊಂಡ ಅವರು, ಕೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಳಿಕ ಡಿಸೆಂಬರ್ 2023ರಲ್ಲಿ ಜಮ್ಮು-ಕಾಶ್ಮೀರ ಪುನರ್ರಚನೆ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿತ್ತು ಮತ್ತು ಆಗಿನಿಂದಲೇ ಆಯೋಗಕ್ಕೆ ಕ್ಷಣಗಣನೆ ಆರಂಭಗೊಂಡಿತ್ತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News