ಜಮ್ಮುಕಾಶ್ಮೀರ: ಪಾಕಿಸ್ತಾನದ ಭಯೋತ್ಪಾದಕರ ಜತೆ ನಂಟು; ಮೂವರು ಸರಕಾರಿ ನೌಕರರ ವಜಾ

Update: 2023-07-17 16:19 GMT

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕಾರ್ಯ ನಿರ್ವಹಿಸಿದ ಆರೋಪದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಕಾಶ್ಮೀರ ವಿಶ್ವವಿದ್ಯಾನಿಲಯದ ವಕ್ತಾರ ಸೇರಿದಂತೆ ಮೂವರು ಸರಕಾರಿ ನೌಕರರನ್ನು ಜಮ್ಮು ಹಾಗೂ ಕಾಶ್ಮೀರ ಆಡಳಿತ ರವಿವಾರ ಕೆಲಸದಿಂದ ವಜಾಗೊಳಿಸಿದೆ.

ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂವಿಧಾನದ ಕಲಂ 311 (2) (ಸಿ) ಉಲ್ಲೇಖಿಸಿ ಆದೇಶ ಜಾರಿ ಮಾಡಿದ್ದಾರೆ. ಸಿನ್ಹಾ ಅವರು 2021 ಎಪ್ರಿಲ್ ನಲ್ಲಿ ಈ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯ ಪಡೆಯನ್ನು ಸ್ಥಾಪಿಸಿದ್ದರು. ಅನಂತರ ಜಮ್ಮು ಹಾಗೂ ಕಾಶ್ಮೀರ ಆಡಳಿತ ಕಲಂ 311 (2) (ಸಿ) ಅಡಿ 52 ಮಂದಿ ಸರಕಾರಿ ನೌಕರರನ್ನು ವಜಾಗೊಳಿಸಿದ್ದಾರೆ.

ಸಿನ್ಹಾ ಅವರು ರವಿವಾರ ಮೂರು ಆದೇಶಗಳನ್ನು ಜಾರಿಗೊಳಿಸಿ ಕಾಶ್ಮೀರ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾಹೀಮ್ ಅಸ್ಲಾಂ, ಕಂದಾಯ ಇಲಾಖೆಯ ಅದಿಕಾರಿ ಮುಝವತ್ ಹುಸೈನ್ ಮಿರ್ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಅರ್ಷಿದ್ ಅಹ್ಮದ್ ಥೋಕರ್ ಅವರನ್ನು ವಜಾಗೊಳಿಸಿದ್ದಾರೆ. ಈ ಮೂವರು ಪಾಕಿಸ್ತಾನದ ಭಯೋತ್ಪಾದನೆ ಸಂಘಟನೆಯೊಂದಿಗೆ ಕಾರ್ಯನಿರ್ವಹಣೆ, ಭಯೋತ್ಪಾದಕರಿಗೆ ಸರಕುಗಳ ಪೂರೈಕೆ, ಭಯೋತ್ಪಾದನೆ ಸಿದ್ಧಾಂತದ ಪ್ರಚಾರ, ಭಯೋತ್ಪಾದಕರಿಗೆ ಹಣ ಸಂಗ್ರಹದ ಆರೋಪ ಎದುರಿಸುತ್ತಿದ್ದಾರೆ.

ಅಸ್ಲಾಂ ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ 2008ರಿಂದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ‘ಗ್ರೇಟರ್ ಕಾಶ್ಮೀರ್’ ಇಂಗ್ಲಿಷ್ ದಿನಪತ್ರಿಕೆಯ ಬಾತ್ಮಿದಾರನಾಗಿ ಕೂಡ ಆಗಿದ್ದರು. ಮಿರ್ ಅವರು 1985ರಲ್ಲಿ ಕಂದಾಯ ಇಲಾಖೆಗೆ ಕಿರಿಯ ಸಹಾಯಕರಾಗಿ ನೇಮಕರಾಗಿದ್ದರು. ಥೋಕರ್ ಅವರು ಜಮ್ಮು ಹಾಗೂ ಕಾಶ್ಮೀರ ಪೊಲೀಸ್ನ ಶಸಸ್ತ್ರ ದಳಕ್ಕೆ ಕಾನ್ಸ್ಟೆಬಲ್ ಆಗಿ 2006ರಲ್ಲಿ ನೇಮಕರಾಗಿದ್ದರು. ಅನಂತರ 2009ರಲ್ಲಿ ಅವರನ್ನು ಅದರ ಕಾರ್ಯಕಾರಿ ದಳಕ್ಕೆ ವರ್ಗಾಯಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News