ಜಮ್ಮುಕಾಶ್ಮೀರ: ‘ಬಂಧನ ಕೇಂದ್ರ’ದಿಂದ ಬಿಡುಗಡೆ ಮಾಡುವಂತೆ ರೊಹಿಂಗ್ಯಾ ಮುಸ್ಲಿಮರ ಆಗ್ರಹ
ಜಮ್ಮು: ‘ಬಂಧನ ಕೇಂದ್ರ’ವೆಂದು ಸೂಚಿಸಲಾದ ಇಲ್ಲಿನ ಹಿರಾನಾಗರ್ ಸಬ್ ಜೈಲಿನಲ್ಲಿ ಕಳೆದ ಎರಡು ವರ್ಷಗಳಿಂದ ಇರುವ ಮ್ಯಾನ್ಮಾರ್ ನ 200ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಮಂಗಳವಾರ ತಮ್ಮನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಅಲ್ಲದೆ, ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರತಿಭಟನೆ ಸರ್ವೇ ಸಾಮಾನ್ಯ ಎಂದು ತಳ್ಳಿ ಹಾಕಿದ್ದಾರೆ.
‘ಬಂಧನ ಕೇಂದ್ರ’ದಿಂದ ಬಿಡುಗಡೆ ಮಾಡುವಂತೆ ಕಳೆದ ಒಂದು ತಿಂಗಳಿಂದ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 2021 ಮಾರ್ಚ್ 5ರಂದು ‘ಬಂಧನ ಕೇಂದ್ರ’ವೆಂದು ಸೂಚಿಸಲಾದ ಹಿರಾನಾಗರ್ ಸಬ್ ಜೈಲಿನಲ್ಲಿ 74 ಮಹಿಳೆಯರು ಹಾಗೂ 70 ಮಕ್ಕಳು ಸೇರಿದಂತೆ ಒಟ್ಟು 271 ರೋಹಿಂಗ್ಯಾ ಮುಸ್ಲಿಮರನ್ನು ಕಾನೂನು ಬಾಹಿರ ವಲಸೆಯ ಆರೋಪದಲ್ಲಿ ಇರಿಸಲಾಗಿದೆ. ಮಹಿಳೆಯೊಬ್ಬರು ಅನಾರೋಗ್ಯಕ್ಕೆ ತುತ್ತಾದ ಬಳಿಕ ಬಂಧನ ಕೇಂದ್ರದಲ್ಲಿ ಪ್ರತಿಭಟನೆ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಾರಾಗೃಹದ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು’’ ಎಂದು ಅವರು ಹೇಳಿದ್ದಾರೆ. ಕಾರಾಗೃಹದ ಮುಖ್ಯ ಗೇಟ್ ಸಮೀಪ ತಲುಪಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಸೌಮ್ಯ ಬಲ ಬಳಸಿದರು ಎಂದು ಮೂಲಗಳು ತಿಳಿಸಿವೆ. ತಮ್ಮನ್ನು ‘ಬಂಧನ ಕೇಂದ್ರ’ದಲ್ಲಿ ಇರಿಸಿರುವುದರ ವಿರುದ್ಧ ರೋಹಿಂಗ್ಯಾಗಳು ಮೇಯಿಂದ ಅನಿದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ.
ಅನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ವಿಷಯವನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಹಾಗೂ ಆದೇಶ ಸ್ವೀಕರಿಸಿದ ಕೂಡಲೇ ಬಿಡುಗಡೆ ಮಾಡಲಾಗುವುದು ಅಥವಾ ತಮ್ಮ ದೇಶಗಳಿಗೆ ಗಡಿಪಾರು ಮಾಡಲಾಗುವುದು ಎಂದು ಮನವೊಲಿಸಿದ ಬಳಿಕ ಅವರು ಪ್ರತಿಭಟನೆ ಹಿಂಪಡೆದಿದ್ದಾರೆ. ವಶಕ್ಕೆ ತೆಗೆದುಕೊಳ್ಳಲಾದ ಹೆಚ್ಚಿನ ವಿದೇಶಿಯರು ಜಮ್ಮುವಿನಲ್ಲಿ ವಿಶೇಷ ಪರಿಶೀಲನಾ ಅಭಿಯಾನದ ಸಂದರ್ಭ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದುದು ಪತ್ತೆಯಾಗಿತ್ತು.