ಹಣ ಅಕ್ರಮ ವರ್ಗಾವಣೆ ಪ್ರಕರಣ : ಕ್ಯಾನ್ಸರ್ ಚಿಕಿತ್ಸೆಗೆ ಮಧ್ಯಂತರ ಜಾಮೀನು ಕೋರಿದ ಜೆಟ್ ಏರ್ವೇಸ್ ನ ಸಂಸ್ಥಾಪಕ ನರೇಶ್ ಗೋಯಲ್
Update: 2024-02-16 15:20 GMT
ಮುಂಬೈ: ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದುಕೊಳ್ಳಲು ಮಧ್ಯಂತರ ಜಾಮೀನು ಕೋರಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಜೆಟ್ ಏರ್ವೇಸ್ ನ ಸಂಸ್ಥಾಪಕ ನರೇಶ್ ಗೋಯಲ್ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನರೇಶ್ ಗೋಯಲ್ ಅವರ ಮಧ್ಯಂತರ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಜಾರಿ ನಿರ್ದೇಶನಾಲಯ ಸಮಯಾವಕಾಶ ಕೋರಿದ್ದರಿಂದ ಅವರ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿ ರೂಪಿಸುವಂತೆ ನ್ಯಾಯಾಲಯ ಆರಂಭಿಕ ಆದೇಶ ಜಾರಿ ಮಾಡಿದೆ.
ಕಳೆದ ತಿಂಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ಖಾಸಗಿ ವೈದ್ಯರಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನರೇಶ್ ಗೋಯಲ್ (74) ಅವರಿಗೆ ಅನುಮತಿ ನೀಡಿದ್ದರು.
ಮಧ್ಯಂತರ ಜಾಮೀನು ಕೋರಿ ಗುರುವಾರ ಸಲ್ಲಿಸಿದ ಅರ್ಜಿಯಲ್ಲಿ ನರೇಶ್ ಗೋಯಲ್, ಖಾಸಗಿ ವೈದ್ಯರಲ್ಲಿ ಪರೀಕ್ಷೆ ನಡೆಸಿದ ಸಂದರ್ಭ ಕ್ಯಾನ್ಸರ್ ಇರುವುದು ಬೆಳಕಿಗೆ ಬಂತು ಎಂದು ತಿಳಿಸಿದ್ದಾರೆ.