ಜಾರ್ಖಂಡ್: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಧರ್ಮಗುರುಗೆ ಜೀವಾವಧಿ ಶಿಕ್ಷೆ
ರಾಂಚಿ: ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸ್ಥಳೀಯ ಮದರಸದ ಧರ್ಮಗುರುಗೆ ಜಾರ್ಖಂಡ್ ಸಿಮ್ದೇಗ ಜಿಲ್ಲೆಯ ವಿಶೇಷ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಶೇಷ ಪೋಕ್ಸೊ ನ್ಯಾಯಾಲಯ ಧರ್ಮಗುರುವನ್ನು ಆಗಸ್ಟ್ 22ರಂದು ದೋಷಿ ಎಂದು ಪರಿಗಣಿಸಿದೆ ಹಾಗೂ ಶುಕ್ರವಾರ ಶಿಕ್ಷೆ ಘೋಷಿಸಿದೆ ಎಂದು ವಿಶೇಷ ಸರಕಾರಿ ವಕೀಲ (ಪಿಪಿ) (ಪೋಕ್ಸೊ) ಅಮಿತ್ ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.
ವಿಚಾರಣೆ ಸಂದರ್ಭ ಒಟ್ಟು 16 ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಬಾಲಕಿಯ ಕುಟುಂಬದ ಸದಸ್ಯರು ಕೊಲೆಬಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅನಂತರ ಧರ್ಮಗುರು ವಿರುದ್ಧ 2022 ಡಿಸೆಂಬರ್ 12ರಂದು ಎಫ್ಐಆರ್ ದಾಖಲಿಸಲಾಗಿತ್ತು. 2022 ಡಿಸೆಂಬರ್ 13ರಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಆರೋಪಿಯ ವಿರುದ್ಧ 2023 ಫೆಬ್ರವರಿ 4ರಂದು ಆರೋಪ ಪಟ್ಟಿ ರೂಪಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಬಾಲಕಿ ಎಂದಿನಂತೆ ರವಿವಾರ ಕೂಡ ಉರ್ದು ಟ್ಯೂಷನ್ಗೆ ತೆರಳಿದ್ದಳು. ತರಗತಿ ಮುಗಿದ ಬಳಿಕ ಬಾಲಕಿ ಹೊರತುಪಡಿಸಿ ಇತರ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ 43 ವರ್ಷದ ಧರ್ಮಗುರು ಅಮಿನುದ್ದಿನ್ ಅನ್ಸಾರಿ ತಿಳಿಸಿದ್ದು, ಅನಂತರ ಬಾಲಕಿಯನ್ನು ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು ಎಂದು ಅಮಿತ್ ಕುಮಾರ್ ಶ್ರೀವಾತ್ಸವ ತಿಳಿಸಿದ್ದಾರೆ.