ಜಾರ್ಖಂಡ್: ಐಟಿ ದಾಳಿ ಸಾಹು ನಿವಾಸ ಇರುವ ಸ್ಥಳದಲ್ಲಿ ಅಗೆಯಲು ಅಧಿಕಾರಿಗಳ ಚಿಂತನೆ

Update: 2023-12-14 15:34 GMT

Photo: newindianexpress.com

ರಾಂಚಿ: ನೆಲದ ಅಡಿಯಲ್ಲಿ ಅಪಾರ ಪ್ರಮಾಣದ ನಿಧಿಯನ್ನು ಅಡಗಿಸಿಟ್ಟಿರುವ ಶಂಕೆಯಲ್ಲಿ ರಾಜ್ಯ ಸಭಾ ಸದಸ್ಯ ಧೀರಜ್ ಸಾಹು ಅವರ ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಮನೆಯ ಸ್ಥಳದ ಕೆಲವು ಭಾಗವನ್ನು ಅಗೆಯಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದುವರೆಗೆ ಅವರ ಬಲದೇವ್ ಸಾಹು ಮತ್ತು ಕಂಪೆನಿಗಳ ಸಮೂಹದ ಬೊಲಂಗಿರ್ ಕಚೇರಿಯಿಂದ 354 ಕೋ.ರೂ. ನಗದು ಪತ್ತೆ ಮಾಡಲಾಗಿತ್ತು. ಈ ನಡುವೆ ಸಾಹುವಿನ ಜಾರ್ಖಂಡ್ ನಲ್ಲಿರುವ ಲೊಹರ್ದಾಗ ನಿವಾಸದ ನೆಲದ ಅಡಿಯಲ್ಲಿ ಅಡಗಿಸಿಟ್ಟಿರುವ ನಿಧಿಯನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡರ್) ಅನ್ನು ಬಳಸಿದ್ದಾರೆ. ಜಿಪಿಆರ್ ಅನ್ನು ಈಗಾಗಲೇ ಅವರ ರಾಂಚಿಯ ನಿವಾಸದಲ್ಲಿ ಬಳಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಸುಮಾರು 12ಕ್ಕೂ ಅಧಿಕ ಅಧಿಕಾರಿಗಳು ಬುಧವಾರ ಸಾಹು ಅವರ ಲೋಹರ್ದಾಗ ನಿವಾಸಕ್ಕೆ ತಲುಪಿದ್ದರು. ಅವರು ತಮ್ಮೊಂದಿಗೆ ಸಾಹು ಕುಟುಂಬದ ಮೂವರನ್ನು ಕರೆದುಕೊಂಡು ಬಂದಿದ್ದರು. ಒಡಿಶಾದಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಹಾಗೂ ಚಿನ್ನ ಪತ್ತೆ ಮಾಡಿದ ಬಳಿಕ ರಾಂಚಿ ಹಾಗೂ ಲೋಹರ್ದಾಗದಲ್ಲಿರುವ ಅವರ ನಿವಾಸ ಇರುವ ನೆಲದಡಿ ಅಡಗಿಸಿ ಇಟ್ಟಿರುವ ನಿಧಿ ಕೂಡ ಪತ್ತೆಯಾಗಬಹುದು ಎಂದು ಅವರು ಸಾಕಷ್ಟು ಭರವಸೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 6 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಹಾಗೂ ದಾಖಲೆ ರಹಿತ ವಹಿವಾಟು ಆರೋಪದಲ್ಲಿ ಬೌದ್ಧ ಡಿಸ್ಟಿಲ್ಲರಿ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಪ್ರವರ್ತಕರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

ಮ್ಯಾರಾಥಾನ್ ದಾಳಿಯ ಕೊನೆಯ ಐದನೇ ದಿನ 300 ಕೋ.ರೂ.ವನ್ನು ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಯಾವುದೇ ತನಿಖಾ ಸಂಸ್ಥೆ ಕೂಡ ಇದುವರೆಗೆ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News