ಜೆಎಂಎಂ ತನ್ನ ತತ್ವ, ಸಿದ್ಧಾಂತದಿಂದ ವಿಮುಖಗೊಂಡು, ಭ್ರಷ್ಟಾಚಾರದಲ್ಲಿ ಮುಳುಗಿದೆ : ಸೀತಾ ಸೊರೇನ್
ರಾಂಚಿ: ಜೆಎಂಎಂ ತನ್ನ ತತ್ವ ಸಿದ್ಧಾಂತದಿಂದ ವಿಮುಖಗೊಂಡು, ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಸಿದ್ಧಾಂತದ ಮೂಲಕ ಜಾರ್ಖಂಡ್ ರಾಜ್ಯವನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅತ್ತಿಗೆ ಸೀತಾ ಸೊರೇನ್ ಹೇಳಿದರು.
ಜಾರ್ಖಂಡ್ ರಾಜ್ಯದ ಎಲ್ಲ 14 ಲೋಕಸಭಾ ಸ್ಥಾನಗಳಲ್ಲಿ ಜಯ ಗಳಿಸಲಿರುವ ಬಿಜೆಪಿಯು ‘ಅಬ್ಕಿ ಬಾರ್ 400 ಪಾರ್’ ಗುರಿಯನ್ನು ಪೂರೈಸಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮಾರ್ಚ್ 19ರಂದು ಬಿಜೆಪಿಗೆ ಸೇರ್ಪಡೆಯಾದ ಜಾಮಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿಯೂ ಆದ ಸೀತಾ ಸೊರೇನ್, ಗುರುವಾರ ಜಾರ್ಖಂಡ್ ಗೆ ಆಗಮಿಸಿದ್ದರು. ರಾಂಚಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. “ನನ್ನ ಪತಿ ದಿವಂಗತ ದುರ್ಗಾ ಸೊರೇನ್ ಪಕ್ಷದಲ್ಲಿರುವವರೆಗೂ ಜೆಎಂಎಂ ಸರಿಯಾದ ದಿಕ್ಕಿನಲ್ಲಿತ್ತು. ಆದರೀಗ, ಅದು ತನ್ನ ಸಿದ್ಧಾಂತ ಮತ್ತು ನೀತಿಗಳಿಂದ ವಿಮುಖಗೊಂಡಿದೆ. ಜೆಎಂಎಂ ಈಗ ಮಧ್ಯವರ್ತಿಗಳ ಹಿಡಿತದಲ್ಲಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದು ವಾಗ್ದಾಳಿ ನಡೆಸಿದರು.
ಮೂರು ಬಾರಿ ಶಾಸಕಿಯಾಗಿದ್ದ ಸೀತಾ ಸೊರೇನ್, ಜೆಎಂಎಂ ಪಕ್ಷದ ವರಿಷ್ಠ ಶಿಬು ಸೊರೇನ್ ಅವರ ಸೊಸೆಯಾಗಿದ್ದಾರೆ. 2009ರಲ್ಲಿ ನನ್ನ ಪತಿ ದುರ್ಗಾ ಸೊರೇನ್ ಮೃತಪಟ್ಟ ನಂತರ ನನ್ನನ್ನು ಜೆಎಂಎಂ ಪಕ್ಷದಲ್ಲಿ ಪ್ರತ್ಯೇಕವಾಗಿರಿಸಲಾಗಿದೆ ಹಾಗೂ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದ ಅವರು, ಮಾರ್ಚ್ 20ರಂದು ಹೊಸ ದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಾರ್ಚ್ 24ರಂದು ಡುಮ್ಕಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸೀತಾ ಸೊರೇನ್ ಅವರನ್ನು ಬಿಜೆಪಿ ಘೋಷಿಸಿದೆ.