ಜೆಎನ್‌ಯು ವಿದ್ಯಾರ್ಥಿ ಯೂನಿಯನ್‌ಗೆ 30 ವರ್ಷಗಳಲ್ಲಿ ಮೊದಲ ಬಾರಿಗೆ ದಲಿತ ಅಧ್ಯಕ್ಷ ಆಯ್ಕೆ
ಹೊಸದಿಲ್ಲಿ: ರಾಜಧಾನಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ರವಿವಾರ ತನ್ನ ಮೊದಲ ದಲಿತ ಅಧ್ಯಕ್ಷನನ್ನು ಆಯ್ಕೆ ಮಾಡಿದೆ. ಎಡ ಬೆಂಬಲಿತ ಗುಂಪುಗಳಿಂದ ಆಯ್ಕೆಯಾದ ಧನಂಜಯ್ ಕಳೆದ 30 ವರ್ಷಗಳ ಅವಧಿಯಲ್ಲಿ ಜೆಎನ್‌ಯುವಿನ ಮೊದಲ ದಲಿತ ವಿದ್ಯಾರ್ಥಿ ಯೂನಿಯನ್ ನಾಯಕರಾಗಿದ್ದಾರೆ.
ಈ ಹಿಂದೆ 1996-97ರಲ್ಲಿ ಎಡ ಗುಂಪುಗಳ ಬಟ್ಟಿ ಲಾಲ್ ಬೈರ್ವಾ ವಿದ್ಯಾರ್ಥಿ ಯೂನಿಯನ್ ನಾಯಕರಾಗಿ ಆಯ್ಕೆಯಾಗಿದ್ದರು.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಧನಂಜಯ್ ಅವರು 2598 ಮತಗಳನ್ನು ಗಳಿಸಿದ್ದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ನ ಉಮೇಶ್ ಸಿ ಅಜ್ಮೀರಾ 1676 ಮತಗಳನ್ನು ಗಳಿಸಿದ್ದರು.
ಧನಂಜಯ್ ಬಿಹಾರದ ಗಯಾ ನಿವಾಸಿಯಾಗಿದ್ದು ಜೆಎನ್‌ಯುವಿನ ಸ್ಕೂಲ್ ಆಫ್ ಆರ್ಟ್ ಎಂಡ್ ಎಸ್ತೆಟಿಕ್ಸ್‌ನ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ.
ವಿವಿಗಳು ತೆಗೆದುಕೊಂಡ ಹೈಯರ್ ಎಜುಕೇಶನ್ ಫಂಡಿಂಗ್ ಏಜನ್ಸಿ ಸಾಲಗಳಿಂದಾಗಿ ವಿವಿಗಳ ಶುಲ್ಕ ಏರಿಕೆ ಕುರಿತು ಧನಂಜಯ್ ತಮ್ಮ ಚುನಾವಣಾ ಪ್ರಚಾರ ವೇಳೆ ಕಳವಳ ವ್ಯಕ್ತಪಡಿಸಿದ್ದರು. ಕ್ಯಾಂಪಸ್‌ನಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ದೇಶದ್ರೋಹ ಆರೋಪದಡಿಯಲ್ಲಿ ಬಂಧಿತರಾದ ವಿದ್ಯಾರ್ಥಿ ನಾಯಕರ ಬಿಡುಗಡೆಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದರು.